top of page

ನಿದ್ರಿಸದೇ ರಾಮನ‌ ರಕ್ಷಣೆಗೆ ನಿಂತ ಲಕ್ಷ್ಮಣ (ರಾಮಾಯಣ ಕಥಾಮಾಲೆ 35)

ಅನಂತರ ಶ್ರೀರಾಮನು ನಾರುಮಡಿಯನ್ನು ಉತ್ತರೀಯವನ್ನಾಗಿ ಹೊದೆದು, ಸಾಯಂಸಂಧ್ಯೋಪಾಸನೆಯನ್ನು ಮಾಡಿ, ಲಕ್ಷ್ಮಣನು ತಂದ ತೀರ್ಥವನ್ನೇ ಆಹಾರರೂಪವಾಗಿ ಸೇವನೆ ಮಾಡಿದನು. ಭಾರ್ಯೆಯಾದ ಸೀತೆಯೊಡನೆ ಭೂಮಿಯ ಮೇಲೆ ಹಾಸಿದ್ದ ಎಲೆಯ ಹಾಸಿಗೆಯಲ್ಲಿ ಮಲಗಲು ಹೊರಟಿದ್ದ ಶ್ರೀರಾಮನ ಕಾಲುಗಳನ್ನು ಲಕ್ಷ್ಮಣನು ತೊಳೆದನು. ಬಳಿಕ ಶ್ರೀರಾಮನು ಆಚಮನ ಮಾಡಿ, ಆ ಪರ್ಣತಲ್ಪದಲ್ಲಿ ಸೀತೆಯೊಡನೆ ಮಲಗಿದನು. ಲಕ್ಷ್ಮಣನು ಸಮೀಪದಲ್ಲಿದ್ದ ಮರದ ಬಳಿಗೆ ಹೋಗಿ ಅದರ ಕೆಳಗಡೆ ಧನುಸ್ಸನ್ನು ಹಿಡಿದು ನಿಂತನು. ಧನುರ್ಧರನಾದ ನಿಷಾದರಾಜನೂ, ಸೂತನಾದ ಸುಮಂತ್ರನೊಡನೆ ಲಕ್ಷ್ಮಣನ ಬಳಿಗೆ ಬಂದು ಶ್ರೀರಾಮನ ಗುಣಕಥನಗಳನ್ನು ಮಾಡುತ್ತಾ ಜಾಗರೂಕತೆಯಿಂದ ಶ್ರೀರಾಮನನ್ನು ರಕ್ಷಿಸುತ್ತಿದ್ದನು.


ಅಣ್ಣನಾದ ಶ್ರೀರಾಮನ ರಕ್ಷಣೆಗಾಗಿ ಸ್ವಾಭಿಮಾನವನ್ನೂ ತೊರೆದು ಸಹಜವಾದ ವಿಶ್ವಾಸದಿಂದ ಜಾಗೃತನಾಗಿ ನಿಂತಿದ್ದ ಲಕ್ಷ್ಮಣನನ್ನು ನೋಡಿ ಸಂತಾಪದಿಂದ ಸಂತಪ್ತನಾಗಿದ್ದ ಗುಹನು, "ರಾಜಪುತ್ರ! ಲಕ್ಷ್ಮಣ! ಸುಖಾವಹವಾದ ಈ ತರಗೆಲೆಗಳ ಹಾಸಿಗೆಯು ನಿನಗಾಗಿ ಸಿದ್ಧವಾಗಿದೆ. ನೀನೂ ಈ ಹಾಸಿಗೆಯಲ್ಲಿ ಸುಖದಿಂದ ವಿಶ್ರಮಿಸಿಕೊಳ್ಳಬಹುದು. ಕ್ಲೇಶಕರವಾದ ಈ ಪಹರೆಯ ಕಾರ್ಯ ಮಾಡಲು ಸದಾ ಅರಣ್ಯದಲ್ಲಿಯೇ ಇರುವ ಈ ಜನರು ಯೋಗ್ಯರಾಗಿರುವರು. ನೀನು ರಾಜಪುತ್ರನಾಗಿರುವುದರಿಂದ ಸುಖಪಡಲು ಯೋಗ್ಯನಾಗಿರುವೆ. ಈ ವಿಧವಾದ ಕಷ್ಟವನ್ನು ನೀನೆಂದೂ ಅನುಭವಿಸಿದವನಲ್ಲ. ಶ್ರೀರಾಮನ ರಕ್ಷಣಾರ್ಥವಾಗಿ ನಾನಿಂದು ಈ ರಾತ್ರಿಯನ್ನು ಜಾಗರಣೆಯಿಂದ ಕಳೆಯುತ್ತೇನೆ. ಲಕ್ಷ್ಮಣ! ನನಗೆ ಈ ಪ್ರಪಂಚದಲ್ಲಿಯೇ ಶ್ರೀರಾಮನಿಗಿಂತಲೂ ಪ್ರಿಯರಾದವರು ಮತ್ತಾರೂ ಇರುವುದಿಲ್ಲ. ಈ ಮಾತನ್ನು ನಾನು ಸತ್ಯವಾಗಿ ಹೇಳುತ್ತಿದ್ದೇನೆ. ಇವನ ಅನುಗ್ರಹದಿಂದಲೇ ನಾನು ಲೋಕದಲ್ಲಿ ಮಹತ್ತರವಾದ ಯಶಸ್ಸನ್ನು ಅಪೇಕ್ಷಿಸಿದ್ದೇನೆ. ಅಪಾರವಾದ ಧರ್ಮವನ್ನು ಇವನ ಸೇವೆಯಿಂದಲೇ ಪಡೆಯಲು ಬಯಸಿದ್ದೇನೆ. ಪುಷ್ಕಳವಾದ ಐಶ್ವರ್ಯವೂ ಇವನ ಅನುಗ್ರಹದಿಂದಲೇ ನನಗೆ ಲಭಿಸಬೇಕಾಗಿದೆ. ಆದುದರಿಂದ ಪ್ರಿಯತಮೆಯಾದ ಸೀತೆಯೊಡನೆ ಮಲಗಿರುವ ಶ್ರೀರಾಮನನ್ನು ನಾನು ಧನುರ್ಧಾರಿಯಾಗಿ ನನ್ನ ಜ್ಞಾತಿ ಬಾಂದವರೊಡನೆ ಸರ್ವಪ್ರಕಾರದಿಂದಲೂ ರಕ್ಷಿಸುತ್ತೇನೆ. ಈ ಅರಣ್ಯದಲ್ಲಿ ಸರ್ವದಾ ಸಂಚಾರ ಮಾಡುತ್ತಿರುವ ನನಗೆ ತಿಳಿಯದಿರುವ ಪ್ರದೇಶವೇ ಇಲ್ಲ. ಅತ್ಯಂತ ಬಲಿಷ್ಟವಾದ ಚತುರಂಗ ಬಲವೇ ಬಂದರೂ ನಾವದನ್ನು ಪರಾಜಯಗೊಳಿಸುತ್ತೇನೆ" ಎಂದನು.



ಅದಕ್ಕೆ ಲಕ್ಷ್ಮಣನು, "ನಿಷಾದರಾಜನೇ! ಅನಘನೇ! ಧರ್ಮೈಕದೃಷ್ಟಿಯುಳ್ಳ ನಿನ್ನಿಂದ ಸಂರಕ್ಷಿಸಲ್ಪಡುವ ನಾವು ಈ ಅರಣ್ಯದಲ್ಲಿ ಭಯಪಡುವ ಕಾರಣವಿಲ್ಲ. ಭಯದ ಕಾರಣದಿಂದ ನಾನು ಕಾವಲಾಗಿ ನಿಂತಿಲ್ಲ. ದಶರಥರಾಜನ ಮಗನಾದ ಶ್ರೀರಾಮನು ರಾಜಕುಮಾರಿಯಾದ ಸೀತೆಯೊಡನೆ ಒರಟಾದ ತರಗೆಲೆಗಳ ಹಾಸಿಗೆಯಲ್ಲಿ ಮಲಗಿರುವಾಗ ನಾನು ಹೇಗೆ ನಿದ್ರೆ ಮಾಡಲಿ? ಹೇಗೆ ಸುಖಪಡಲಿ? ಹೇಗೆ ಜೀವಿಸಲಿ?

ದೇವಾಸುರರೆಲ್ಲರೂ ಒಟ್ಟಾಗಿ ಬಂದು ಯುದ್ಧಮಾಡಿದರೂ ಯಾವ ನಮ್ಮ ಶ್ರೀರಾಮನನ್ನು ಪರಾಜಯಗೊಳಿಸಲು ಸಾಧ್ಯವಿಲ್ಲವೋ ಅಂತಹ ಮಹಾಪರಾಕ್ರಮಿಯು ರಾಜಕುಮಾರಿಯಾದ ಸೀತೆಯೊಡನೆ ಹುಲ್ಲಿನ ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನಾದರೂ ನೋಡು. ಯಾವ ರಾಮನು ನಮ್ಮ ತಂದೆಯು ಮಾಡಿದ ಮಂತ್ರಪುನಶ್ಚರಣೆಗಳಿಂದಲೂ, ತಪಸ್ಸಿನಿಂದಲೂ, ವಿಧ ವಿಧವಾದ ಯಜ್ಞಗಳನ್ನು ಮಾಡಿದ ಪರಿಶ್ರಮದಿಂದಲೂ ಮಗನಾಗಿ ಹುಟ್ಟಿದನೋ ಅಂತಹ ಶ್ರೀರಾಮನೊಬ್ಬನೇ ನಮ್ಮ ತಂದೆಗೆ ಸದೃಶವಾದ ಲಕ್ಷಣಗಳುಳ್ಳವನು ಮತ್ತು ಬಹಳ ಇಷ್ಟವಾದವನು. ಅಂತಹವನಿಂದು ಈ ಹುಲ್ಲಿನ ಹಾಸಿಗೆಯಲ್ಲಿ ಮಲಗಿದ್ದಾನೆ. ಶ್ರೀರಾಮನು ಅಯೋಧ್ಯೆಯಿಂದ ಹೊರಟು ಬಂದಿರುವುದರಿಂದ ನಮ್ಮ ತಂದೆಯು ಹೆಚ್ಚು ಕಾಲ ಜೀವಿಸಿರಲಾರನು ಇದರಿಂದಾಗಿ ಭೂದೇವಿಯು ಬಹಳ ಬೇಗ ವಿಧವೆಯಾಗುವುದು ನಿಜ. ರಾಮನು ಅರಣ್ಯಕ್ಕೆ ಪ್ರಯಾಣಮಾಡಲಾಗಿ ಅಂತಃಪುರದ ಸ್ತ್ರೀಯರು ಗಟ್ಟಿಯಾಗಿ ಬಹಳ ಹೊತ್ತಿನವರೆಗೂ ಗೋಳಾಡುತ್ತಿದ್ದು ಆಯಾಸದಿಂದ ಅಳುವನ್ನು ನಿಲ್ಲಿಸಿರುವರು. ಈ ಕಾರಣದಿಂದ ಶ್ರೀರಾಮನ ಅರಮನೆಯು ಈ ವೇಳೆಗೆ ನಿಶ್ಚಬ್ಧವಾಗಿರಬಹುದೆಂದು ಭಾವಿಸುತ್ತೇನೆ. ಕೌಸಲ್ಯೆ, ದಶರಥ ಮತ್ತು ನಮ್ಮ ತಾಯಿ ಸುಮಿತ್ರೆ ಇವರು ಇದುವರೆಗೂ ಜೀವಿಸಿರುವರೆಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ಜೀವಿಸಿದ್ದರೂ ಈ ರಾತ್ರಿಯು ಕಳೆಯುವವರೆಗೆ ಬದುಕಿರಬಹುದು, ರಾಜನಲ್ಲಿಯೇ ಅನುರಕ್ತರಾದ ಜನರಿಂದ ವ್ಯಾಪ್ತವಾಗಿದ್ದ, ಸುಖವಾಗಿದ್ದ ಮತ್ತು ಸಕಲಪ್ರಜೆಗಳಿಗೂ ಸಂತೋಷವನ್ನುಂಟು ಮಾಡುತ್ತಿದ್ದ ಆ ಅಯೋಧ್ಯಾ ಪಟ್ಟಣವು ಶ್ರೀರಾಮನ ವಿಯೋಗ ವ್ಯಸನದಿಂದಲೂ, ರಾಜನ ಮರಣ ವ್ಯಸನದಿಂದಲೂ ವಿನಾಶ ಹೊಂದುತ್ತದೆ. ಗುಹ! ಇದಕ್ಕೆ ಬದಲಾಗಿ ಅಷ್ಟು ಕಾಲದವರೆಗೂ ಪುತ್ರವಿಯೋಗದ ದುಃಖವನ್ನು ಸಹಿಸಿಕೊಂಡು ರಾಜನು ಬದುಕಿರುವನೋ? ನಾವಾದರೂ ಅರಣ್ಯದಿಂದ ಹಿಂದಿರುಗಿ ಬಂದು ಮಹಾತ್ಮನಾದ, ಸುವ್ರತನಾದ, ಕುಶಲಿಯಾದ ದಶರಥನನ್ನು ಪುನಃ ಕಾಣುವೆವೇ? ಸತ್ಯಪ್ರತಿಜ್ಞನಾದ ಶ್ರೀರಾಮನೊಡನೆ ನಾವು ವನವಾಸವನ್ನು ಮುಗಿಸಿಕೊಂಡು ಈ ಅಯೋಧ್ಯಾ ಪಟ್ಟಣವನ್ನು ಪುನಃ ಪ್ರವೇಶಿಸುವೆವೇ?" ಎಂದನು.


ದುಃಖಪೀಡಿತನಾಗಿದ್ದ ಮಹಾತ್ಮನಾದ ಲಕ್ಷ್ಮಣನಿಗೆ ದುಃಖದ ಅಧಿಕ್ಯದಿಂದ ಗುಹನೊಡನೆ ಹೀಗೆ ವಿಲಪಿಸುತ್ತಿರುವಾಗಲೇ ಆ ರಾತ್ರಿಯು ಕಳೆದೇ ಹೋಯಿತು. ನರೇಂದ್ರಪುತ್ರನಾದ, ಪ್ರಜೆಗಳಿಗೆ ಹಿತನಾದ ಲಕ್ಷ್ಮಣನು ಸತ್ಯವಾದ ಮಾತುಗಳನ್ನು ಹೇಳುತ್ತಿರುವಾಗ ದಶರಥನಲ್ಲಿ ಮತ್ತು ಶ್ರೀರಾಮನಲ್ಲಿ ಅಪಾರವಾದ ಸ್ನೇಹವನ್ನು ಹೊಂದಿದ್ದ ಗುಹನು ಮಹಾವ್ಯಸನದಿಂದ ಪೀಡಿತನಾಗಿ ಜ್ವರದಿಂದ ಪೀಡಿಸುತ್ತಿರುವ ಆನೆಯು ಕಣ್ಣೀರನ್ನು ಸುರಿಸುವಂತೆ ಕಂಬನಿಗರೆದನು.

Comments


bottom of page