top of page

ಧೃತರಾಷ್ಟ್ರನ ತೋರಿಕೆಯ ಶೋಕ (ಮಹಾಭಾರತ ಕಥಾಮಾಲೆ 56)

11 minutes ago
2 min read

ವಿದುರನು ಕಳುಹಿಸಿದ ವ್ಯಕ್ತಿಯ ಸಹಾಯದಿಂದ ಗಂಗಾ ನದಿಯನ್ನು ದಾಟಿದ ಪಾಂಡವರು ವಿದುರನಿಗೆ ತಮ್ಮ ಕೃತಜ್ಞತೆಗಳನ್ನೂ, ಕೆಲ ಆಪ್ತ ವಿಷಯಗಳನ್ನೂ ಆ ನಾವಿಕನ ಮೂಲಕವೇ ತಲುಪಿಸಿದರು. ನಂತರ, ಅಲ್ಲಿಂದ ತಮ್ಮ ಪ್ರಯಾಣವನ್ನು ಮುಂದುವರಿಸಿದರು.

ವಿದುರನು ತನಗೆ ನಿಷ್ಠರಾದ ಗುಪ್ತಚರರ ಮೂಲಕವಾಗಿಯೇ ಎಲ್ಲ ವಿಷಯಗಳನ್ನೂ ತಿಳಿಯುತ್ತಾ, ಶತ್ರುವಿನ ಹೃದಯವನ್ನು ತಿಳಿಯುತ್ತಾ, ಅದಕ್ಕೆ ಪ್ರತೀಕಾರವನ್ನು ಸಿದ್ಧಪಡಿಸುತ್ತಿದ್ದನು. ಪಾಂಡವರಿಗೆ ಸಹಕಾರದ ಅಗತ್ಯವಿದ್ದಾಗಲೆಲ್ಲ ತನ್ನ ನಿಷ್ಠಾವಂತರನ್ನು ಕಳುಹಿಸಿ, ಅವರು ತಾವಾರೆಂದು ಪಾಂಡವರಿಗೆ ತಿಳಿಸುವಂತೆ ಮಾಡಿ, ಅಗತ್ಯ ನೆರವು ನೀಡುತ್ತಿದ್ದನು. ರಹಸ್ಯವನ್ನೂ ಕಾಪಾಡಿಕೊಳ್ಳುತ್ತಿದ್ದನು. ವಿದುರನು ಎಂಥ ಮೇಧಾವಿಯಾಗಿದ್ದ ರಾಜಕಾರಣಿಯೆಂಬುದು ಇದರಿಂದ ಅರ್ಥವಾಗುತ್ತದೆ.

ಅಲ್ಲದೆ, ಯಂತ್ರ ಯುಕ್ತವಾದ ನೌಕೆಯೂ ಅಷ್ಟೇ. ಇಂತಹ ರಚನೆಗಳು ಆಗಲೇ ನಮ್ಮ ಜನರಿಗೆ ತಿಳಿದಿದ್ದವೆಂಬುದೂ ರೋಚಕ ಸಂಗತಿಯಾಗಿದೆ.

ಇತ್ತ, ವಾರಣಾವತದಲ್ಲಿ ಮುಂಜಾನೆಯವರೆಗೂ ಉರಿದ ಬೆಂಕಿಯು ಅರಗಿನ ಮನೆಯನ್ನು ಸಂಪೂ



ರ್ಣ ಆಹುತಿ ತೆಗೆದುಕೊಂಡಿತು. ದೂರದವರೆಗೂ ಪಸರಿಸಿದ್ದ ವಾಸನೆಯ ಕಾರಣದಿಂದ ಆ ಅರಮನೆಯು ಬೇಗ ಹೊತ್ತುಕೊಳ್ಳುವ ಅರಗಿನಂಥ ಪದಾರ್ಥಗಳಿಂದ ಕಟ್ಟಲ್ಪಟ್ಟಿದ್ದಾಗಿತ್ತೆಂದು ಜನರು ನಿಶ್ಚಯಿಸಿದರು. ಎಲ್ಲರೂ ಸುತ್ತ ಸೇರಿ, ಆಗಲೇ ಶಾಂತವಾಗುತ್ತಾ ಬಂದಿದ್ದ ಅಗ್ನಿಯನ್ನು ಪೂರ್ತಿಯಾಗಿ ಆರಿಸಿದರು. ಸುರಂಗದ ಬಾಯಿಯ ಮೇಲೆ ಬೂದಿಯ ರಾಶಿಯು ಬಿದ್ದಿತ್ತು. ಆದ್ದರಿಂದ ಅಲ್ಲಿ ಸುರಂಗವಿರಬಹುದೆಂಬ ಅರಿವು ಯಾರಿಗೂ ಬರಲಿಲ್ಲ. ಅಲ್ಲಿ ಹಿಂದಿನ ರಾತ್ರಿ ಉಳಿದಿದ್ದ ನಿಷಾದಿಯು ತನ್ನ ಐವರು ಮಕ್ಕಳೊಡನೆ ಸುಟ್ಟು ಹೋಗಿದ್ದರಿಂದ, ಪಾಂಡವರೇ ಸುಟ್ಟು ಹೋಗಿರುವರೆಂದು ಭಾವಿಸಿ ಪೌರರು ಶೋಕಿಸಿದರು. ದುಷ್ಟನಾದ ಪುರೋಚನನು ಅಗ್ನಿಯಲ್ಲಿ ದಗ್ಧನಾದದ್ದು ಜನರಿಗೆ ಸ್ವಲ್ಪ ಸಮಾಧಾನವನ್ನೇ ತಂದಿತ್ತು. ಪಾಪಿಗೆ ತಕ್ಕ ಶಿಕ್ಷೆಯಾಯಿತೆಂದು ಆಡಿಕೊಂಡರು.

ಇವೆಲ್ಲ ದುಷ್ಟ ಯೋಜನೆಗಳೂ ಪಾಂಡವರ ವಿನಾಶಕ್ಕಾಗಿ ಧೃತರಾಷ್ಟ್ರನ ಒಪ್ಪಿಗೆಯೊಂದಿಗೇ ದುರ್ಯೋಧನನು ಮಾಡಿದ್ದಾನೆಂದು ಎಲ್ಲರೂ ಬೈದುಕೊಂಡರು. ಭೀಷ್ಮ, ದ್ರೋಣ, ಕೃಪರೆಲ್ಲರೂ ಈ ಅಧರ್ಮವನ್ನು ತಡೆಯಲು ವಿಫಲರಾದರೆಂದು ಜನರು ಜರಿದರು. ಕೆಲ ಧೈರ್ಯಶಾಲಿ ಜನಗಳ ಮೂಲಕವಾಗಿ ಧೃತರಾಷ್ಟ್ರನಿಗೆ "ನಿನ್ನ ಮಹತ್ತಾದ ಇಚ್ಛೆಯು ಪೂರ್ಣವಾಯಿತು. ನೀನು ಪಾಂಡವರನ್ನು ಜೀವ ಸಹಿತವಾಗಿ ಸುಟ್ಟು ಕೃತಕೃತ್ಯನಾದೆ" ಎಂದೇ ಸಂದೇಶವನ್ನೂ ತಲುಪಿಸಿದರು. ಪುರೋಚನನೂ, ಕುಂತೀ ಸಹಿತವಾಗಿ ಪಾಂಡವರೂ ಭಸ್ಮೀಭೂತರಾದರು ಎಂಬ ವಾರ್ತೆಯ ಹಸ್ತಿನಾಪುರಕ್ಕೆ ತಲುಪಿತು.

ಈ ವಾರ್ತೆಯನ್ನು ಕೇಳಿದ ಧೃತರಾಷ್ಟ್ರನು ವಿಲಪಿಸಲು ಪ್ರಾರಂಭಿಸಿದನು, "ಅಯ್ಯೋ! ಕುಂತೀ ಸಮೇತರಾಗಿ ಪಾಂಡವರು ಭಸ್ಮವಾದರೇ? ಪಾಂಡು ಪುತ್ರರನ್ನು ನೋಡಿ ನನ್ನ ತಮ್ಮ ಪಾಂಡುವೇ ಬದುಕಿರುವನೆಂದು ಭಾವಿಸಿದ್ದೆ! ಇಂದು ನಿಜಕ್ಕೂ ನನ್ನ ತಮ್ಮ ಪಾಂಡುವು ಮೃತನಾದನು. ಅಯ್ಯೋ! ದುರ್ವಿಧಿಯೇ! ಬಂಧು ಮಿತ್ರರೇ! ನೀವೆಲ್ಲ ವಾರಣಾವತಕ್ಕೆ ಹೋಗಿ, ಮೃತರಿಗೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಿ, ಅಸ್ಥಿ ಸಂಚಯನ ಮಾಡಿ" ಎಂದು ತೋರಿಕೆಯ ಕಣ್ಣೀರು ಸುರಿಸಿದನು.

"ಹಾ! ಕುಂತಿ!! ಹಾ! ಯುಧಿಷ್ಠಿರ!!" ಮುಂತಾಗಿ ರೋಧಿಸುತ್ತಾ ಉದಕ ತರ್ಪಣ ಇತ್ತನು. ಪಾಂಡವರು ಮೃತರಾದರೆಂದೇ ಭಾವಿಸಿದ ಪುರಜನರ, ಪರಿವಾರದವರ ಹೃದಯವು ಭಾರವಾಯಿತು. ಅವರೆಲ್ಲರ ರೋಧನವು ನಭೋಮಂಡಲವನ್ನು ತುಂಬಿತು.

ನಡೆದ ವಿಷಯದ ಸಂಪೂರ್ಣ ಅರಿವಿದ್ದ ವಿದುರನು ಮಾತ್ರ ತೋರಿಕೆಯ ದುಃಖವನ್ನು ಪ್ರಕಟಿಸಿದನೆ ಹೊರತು, ಅಂತರಂಗದಲ್ಲಿ ಪಾಂಡವರು ಮೃತ್ಯುವಿನಿಂದ ಪಾರಾದ ಕುರಿತಾಗಿ ಸಂತೋಷಿಸಿದನು.

ಇತ್ತ ನಾವೆಯಿಂದಿಳಿದ ಪಾಂಡವರು, ನಕ್ಷತ್ರಗಳ ಸಹಾಯದಿಂದ ದಕ್ಷಿಣ ದಿಕ್ಕನ್ನು ತಿಳಿದು, ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿದರು. ಮುಂದುವರಿದು ಘೋರವಾದ ಅರಣ್ಯ ಮಧ್ಯಕ್ಕೆ ತಲುಪಿದರು. ಎಲ್ಲರೂ ಹಸಿವು-ಬಾಯಾರಿಕೆಯಿಂದ ಬಹುವಾಗಿ ಬಳಲಿದರು. ನಿದ್ರೆಯು ಎಲ್ಲರನ್ನೂ ಆವರಿಸುತ್ತಿತ್ತು. ಮುಂದೇನು ಮಾಡಬೇಕೆಂದು ತಿಳಿಯದಾಯಿತು. ಹೇಗೆ ಆ ಅರಣ್ಯವನ್ನು ದಾಟುವುದೆಂಬ ಆತಂಕವು ಕಾಡತೊಡಗಿತು. ಆಗ ಯುಧಿಷ್ಠಿರನು ಭೀಮನಿಗೆ, "ತಮ್ಮ! ಈ ಅರಣ್ಯದಿಂದ ಹೊರಹೋಗುವ ಶಕ್ತಿಯನ್ನೇ ಕಳೆದುಕೊಂಡಿರುವ ನಮ್ಮೆಲ್ಲರನ್ನೂ ಈ ಹಿಂದಿನಂತೆ ನೀನೇ ಎತ್ತಿಕೊಂಡು ಹೋಗು. ನಾವು ಯಾರಿಗೂ ತಿಳಿಯದಂತೆ ಪಾರಾಗಬೇಕಾಗಿದೆ. ದುಷ್ಟನಾದ ಪುರೋಚನನು ಸತ್ತುಹೋದನೋ ಅಥವಾ ಬದುಕಿಯೇ ಇರುವನೋ ನಮಗೆ ತಿಳಿಯದು. ಬದುಕಿದ್ದರೆ ಆತ ನಮ್ಮ ಇರುವನ್ನು ತಿಳಿದರೂ ತಿಳಿದಾನು. ಆದ್ದರಿಂದ ಬೇಗ ಇಲ್ಲಿಂದ ಪಾರಾಗಬೇಕಿದೆ. ನೀನು ಮಾತ್ರ ನಮ್ಮನ್ನು ಇಲ್ಲಿಂದ ಪಾರುಗಾಣಿಸಬಲ್ಲೆ" ಎಂದು ನುಡಿದನು.


Comments


bottom of page