top of page

ಅರಗಿನ ಮನೆಯ ದಹನ ( ಮಹಾಭಾರತ ಕಥಾಮಾಲೆ 55)

12 hours ago
2 min read

ಇತ್ತ ಪುರೋಚನನು ಅರಮನೆಯ ಮಹಾದ್ವಾರದ ಸಮೀಪದಲ್ಲಿಯೇ ಬಿಡಾರ ಹೂಡಿ, ತನ್ನ ಯೋಜನೆಯನ್ನು ಪೂರ್ಣಗೊಳಿಸಲು ಕಾಲ ಕಾಯುತ್ತಿದ್ದನು. ಪಾಂಡವರು ಹಗಲಿಡೀ ಬೇಟೆಯ ನೆಪದಲ್ಲಿ ಹೊರಗೇ ಕಾಲ ಕಳೆಯುತ್ತಿದ್ದರು. ರಾತ್ರಿ ಆಯುಧಗಳನ್ನು ಸಮೀಪದದಲ್ಲೇ ಇರಿಸಿಕೊಂಡು ಮಲಗುತ್ತಿದ್ದರು. ದಿನವೂ ಪುರೋಚನನನ್ನು ಆತನ ಸೇವೆಗಳಿಗಾಗಿ ಪ್ರಶಂಸಿಸುತ್ತಿದ್ದರು. ಇದರಿಂದ ಪಾಂಡವರು ತನ್ನ ಮೇಲೆ ಹೊಂದಿರುವ ಅಪನಂಬಿಕೆಯ ಲೇಷವೂ ಪುರೋಚನನಿಗೆ ತಿಳಿಯಲು ಸಾಧ್ಯವಾಗಲಿಲ್ಲ. ತನ್ನನ್ನು ಪಾಂಡವರು ಪೂರ್ಣ ನಂಬಿದ್ದಾರೆಂದೇ ಪುರೋಚನನು ಭಾವಿಸಿದನು. ಪಾಂಡವರನ್ನು ಸುಟ್ಟು ಬಿಡಲು ಕಾಲವೊದಗಿತೆಂದು ಭಾವಿಸಿ ಆತನು ಸಂತೋಷಗೊಂಡನು. ಆತನ ಮುಖಾವಲೋಕನದಿಂದಲೇ ಯುಧಿಷ್ಠಿರನು ಆತನ ಮನದ ಇಂಗಿತವನ್ನು ಅರಿತು, "ತಮ್ಮಂದಿರೇ! ನಾವು ಇಲ್ಲಿಂದ ತಪ್ಪಿಸಿಕೊಳ್ಳುವ ಸಮಯ ಒದಗಿದೆ. ಅರಮನೆಗೆ ಸೇರಿದಂತೆಯೇ ಇರುವ ಆಯುಧಾಗಾರಕ್ಕೆ ಬೆಂಕಿ ಹಚ್ಚಿ, ಪುರೋಚನನನ್ನು ಇಲ್ಲಿಯೇ ಭಸ್ಮವಾಗುವಂತೆ ಮಾಡಿ, ಆರು ಪ್ರಾಣಿಗಳನ್ನು ನಮ್ಮ ಸ್ಥಳದಲ್ಲಿಟ್ಟು ಯಾರಿಗೂ ತಿಳಿಯದಂತೆ ತಪ್ಪಿಸಿಕೊಂಡು ಹೋಗಬೇಕು" ಯುಧಿಷ್ಠಿರನ ಮಾತಿಗೆ ಎಲ್ಲರೂ ಸಮ್ಮತಿಸಿದರು.

ಒಂದು ರಾತ್ರಿ ಕುಂತಿಯು ಅನೇಕ ಬ್ರಾಹ್ಮಣ ಸುವಾಸಿನಿಯರನ್ನು ಅರಮನೆಗೆ ಕರೆದು ಮೃಷ್ಟಾನ್ನ ಭೋಜನ ಮಾಡಿಸಿ, ಯಥೇಚ್ಛವಾಗಿ ದಾನ ದಕ್ಷಿಣೆಗಳನ್ನು ನೀಡಿದಳು. ಬಂದವರೆಲ್ಲರೂ ಸಂತುಷ್ಟರಾಗಿ ಕುಂತಿಯನ್ನು ಹರಿಸಿ, ಮನೆಗೆ ತೆರಳಿದರು. ಅದೇ ರಾತ್ರಿ ಅನಾಹೂತಳಾದರೂ ದೈವದಿಂದ ಆಹೂತಳಾಗಿ ಬಂದವಳಂತೆ ಪಂಚ ಪುತ್ರರಿಂದ ಒಡಗೂಡಿದ ನಿಷಾದಿಯೊಬ್ಬಳು ಆಹಾರದ, ಅಪೇಕ್ಷೆಯಿಂದ ಅರಮನೆಗೆ ಬಂದಳು. ಯಥೇಚ್ಛವಾಗಿ ಆಹಾರ ಭಕ್ಷಣ ಮಾಡಿ, ಮಿತಿ ಮೀರಿ ಮದ್ಯವನ್ನೂ ಕುಡಿದು, ಜ್ಞಾನ ಶೂನ್ಯಳಾಗಿ, ಮೃತ ಪ್ರಾಯಳಾಗಿ, ತನ್ನೈವರು ಮಕ್ಕಳೊಡನೆ ಅರಗಿನ ಮನೆಯಲ್ಲಿಯೇ ಮಲಗಿದಳು. ಗಾಢ ನಿದ್ರೆಯು ಆ ನಿಷಾದಿಯನ್ನೂ ಅವಳ ಐವರು ಮಕ್ಕಳನ್ನೂ ಆವರಿಸಿತು.

ಕಾಳರಾತ್ರಿ ಜೋರಾಗಿ ಗಾಳಿಯು ಬೀಸುತ್ತಲಿತ್ತು. ನಗರವು ಗಾಢ ನಿದ್ರೆಯಲ್ಲಿ ಲೀನವಾಗಿತ್ತು. ಅದೇ ಕಾಲದಲ್ಲಿ ಭೀಮನು ದೊಡ್ಡ ಪಂಜೊಂದನ್ನು ಹಚ್ಚಿಕೊಂಡು, ಮೊದಲು ಪುರೋಚನನ ಬಿಡಾರಕ್ಕೆ ಬೆಂಕಿಯಿಟ್ಟನು. ನಂತರ ಅರಗಿನ ಮನೆಯ ಬಾಗಿಲಿಗೂ, ಮನೆಯ ನಾಲ್ಕು ಕಡೆಗಳಿಗೂ ಬೆಂಕಿಯಿಕ್ಕಿ, ಗಾಳಿಯ ಪ್ರಭಾವದಿಂದ ಅರಗಿನ ಮನೆಯು ಉರಿಯಲು ಪ್ರಾರಂಭವಾದೊಡನೆಯೇ ಕುಂತೀ ಸಮೇತರಾದ ಪಾಂಡವರು ಸುರಂಗದಲ್ಲಿ ತಪ್ಪಿಸಿಕೊಂಡರು.

ಅರಗಿನ ಮನೆಗೆ ಸೇರಿದಂತೆಯೇ ಇಡಾ ಆಯುಧಾಗಾರವೂ ಮನೆಯ ಜೊತೆ ಜೊತೆಗೆ ಹೊತ್ತಿ ಉರಿಯತೊಡಗಿತು. ಛಟ-ಪಟ ಶಬ್ದ ಹಾಗೂ ಬೆಂಕಿಯ ಜ್ವಾಲೆಯಿಂದ ಎಚ್ಚೆತ್ತ ನಗರದ ಜನರು ಕಾಳರಾತ್ರಿಯಲ್ಲಿ ಸುತ್ತಲೂ ಬೆಳಕು ಚೆಲ್ಲುತ್ತಾ ಧಗ ಧಗಿಸುತ್ತಿದ್ದ ಅರಮನೆಯ ಕಡೆಗೆ ಧಾವಿಸಿದರು. ಆದರೆ, ಜೋರಾಗಿ ಉರಿಯುತ್ತಿದ್ದ ಬೆಂಕಿಯನ್ನು ಆರಿಸಲು ಸಾಧ್ಯವಾಗಲಿಲ್ಲ . ಅರಮನೆಯ ಒಳಗಿರಬಹುದಾದ ಪಾಂಡವರ ದುರವಸ್ಥೆಯನ್ನು ನೆನೆದ ನಾಗರಿಕರು ದುಃಖಿತರಾದರು. ಧೃತರಾಷ್ಟ್ರ, ದುರ್ಯೋಧನ, ಪುರೋಚನರಿಗೆ ಹಿಡಿಶಾಪ ಹಾಕಿದರು. ನಭೋ ಮಂಡಲವನ್ನು ವ್ಯಾಪಿಸುವಂತೆ ಈ ಮೂವರಿಗೆ ಧಿಕ್ಕಾರ ಹಾಕಿದರು. ಈ ಬೆಂಕಿಯಲ್ಲಿ ಸುಟ್ಟು ಹೋದ ಪುರೋಚನನ ಕುರಿತಾಗಿ ಯಾರೂ ಯಾವ ಕರುಣೆಯನ್ನೂ ತೋರಲಿಲ್ಲ. ದುಷ್ಟನಿಗೆ ತಕ್ಕ ಶಾಸ್ತಿಯಾಯಿತೆಂದೇ ಭಾವಿಸಿದರು. ಪಾಂಡವರನ್ನು ನೆನೆದು ಗೋಳಿಡುತ್ತಾ, ಉರಿಯುತ್ತಿದ್ದ ಅರಮನೆಯ ಸುತ್ತಲೂ ನಿಂತು, ಆ ರಾತ್ರಿಯನ್ನು ಕಳೆದರು.

ಇತ್ತ ಪಾಂಡವರು ಕುಂತಿಯೊಡನೆ ಸುರಂಗದ ಮೂಲಕ ಹೊರಗೆ ಧಾವಿಸತೊಡಗಿದರು. ಆದರೆ, ನಿದ್ರೆಯಿಲ್ಲದೇ ಭೀತಿಯಿಂದ ಬಳಲಿದ್ದ ಅವರಿಗೆ ವೇಗವಾಗಿ ನಡೆಯಲು ಅಸಾಧ್ಯವಾಗಿದ್ದಿತು. ಇನ್ನೂ ಹೆಚ್ಚು ದೂರ ನಡೆಯಲು ಸಾಧ್ಯವಾಗದೆಂದು ಎಲ್ಲರಿಗೂ ಮನವರಿಕೆಯಾಯಿತು. ಎಲ್ಲರೂ ಭೀಮನ ಮುಖವನ್ನೇ ನೋಡತೊಡಗಿದರು.

ತಾಯಿಯ ಮತ್ತು ಸಹೋದರರ ಈ ಅವಸ್ಥೆಯನ್ನರಿತ, ಮಹಾ ಪರಾಕ್ರಮ ಶಾಲಿಯಾದ ಭೀಮಸೇನನು ತಡ ಮಾಡದೇ, ತನ್ನ ತಾಯಿಯನ್ನು ಹೆಗಲ ಮೇಲೆ ಕೂರಿಸಿಕೊಂಡನು. ನಕುಲ ಸಹದೇವರುಗಳನ್ನು ಎರಡು ಕಂಕುಳುಗಳಲ್ಲಿ ಎತ್ತಿಕೊಂಡನು. ಯುಧಿಷ್ಠಿರ ಪಾರ್ಥರನ್ನು ಕೈಗಳಿಂದಲೇ ತಬ್ಬಿಕೊಂಡು ಓಡಲಾರಂಭಿಸಿದನು. ಭೀಮನ ಮಾರ್ಗದಲ್ಲಿ ಅಡ್ಡ ಸಿಕ್ಕಿ ಮರಗಳು ಧರೆಗುರುಳಿದವು. ಭೀಮನು ಹೆಜ್ಜೆಯಿಟ್ಟಲ್ಲಿ ಭೂಮಿಯು ಕುಸಿಯುತ್ತಿತ್ತು. ಭೀಮನು ನಡೆದಿದ್ದೇ ದಾರಿಯಾಗುತ್ತಿತ್ತು. ವಾಯು ವೇಗಕ್ಕೆ ಸಮನಾಗಿ ಓಡುತ್ತಿದ್ದ ವೃಕೋದರನು ತ್ವರೆಯಿಂದ ಅನೇಕ ದರೀ ದುರ್ಗಗಳನ್ನು ದಾಟಿ ಮುಂದೆ ಹೋದನು. ಮುಂದುವರಿದು, ಗಂಗಾ ನದಿಯ ತೀರವನ್ನು ಸೇರಿ ಎಲ್ಲರನ್ನೂ ಕೆಳಗಿಳಿಸಿದನು. ಎಲ್ಲರೂ ಗಂಗಾ ನದಿಯನ್ನು ದಾಟಲು ಅನುಕೂಲವಾದ ಸ್ಥಳವನ್ನು ಹುಡುಕತೊಡಗಿದರು. ಆದರೆ, ಆಳವಾದ ನದಿಯನ್ನು ಕಾಲ್ನಡಿಗೆಯಲ್ಲಿ ದಾಟಲು ಅಸಾಧ್ಯವಾಗಿತ್ತು.

ಆ ವೇಳೆಗೆ ಸರಿಯಾಗಿ ನಿರ್ಮಾನುಷವಾಗಿದ್ದ ಆ ಪ್ರದೇಶದಲ್ಲಿ ಮನುಷ್ಯನೊಬ್ಬನು ಕಾಣಿಸಿಕೊಂಡು, ತಾನು ವಿದುರನಿಂದ ಕಳುಹಿಸಲ್ಪಟ್ಟವನೆಂದೂ, ಯಂತ್ರ ಸಹಿತವಾದ ನಾವೆಯೊಂದಿಗೆ ಪಾಂಡವರನ್ನು ನದಿ ದಾಟಿಸಲು ಬಂದಿರುವುದಾಗಿಯೂ ತಿಳಿಸಿದನು. ನಾವೆಯನ್ನು ಏರಲು ತಿಳಿಸಿದಾಗ ಪಾಂಡವರು ಅನುಮಾನದಿಂದ ಹಿಂಜರಿದರು. ಆಗ ಆ ಮನುಷ್ಯನು ಯುಧಿಷ್ಠಿರನಿಗೆ ವಿದುರನೊಂದಿಗಿನ ಮ್ಲೇಚ್ಛ ಭಾಷೆಯಲ್ಲಿ ನಡೆಸಿದ ಸಂಭಾಷಣೆಯ ಕುರಿತಾಗಿ ಹೇಳಿದಾಗ, ಪಾಂಡವರಿಗೆ ಈತನು ವಿದುರನಿಂದ ಪ್ರೇಷಿತನಾದವನೇ ಹೌದೆಂಬುದು ಖಾತ್ರಿಯಾಯಿತು. ನಾವಿಕನ ನಿರ್ದೇಶನದಂತೆ ಆರೂ ಮಂದಿ ನೌಕೆಯನ್ನು ಏರಿದರು. ನೌಕೆಯು ನದಿಯನ್ನು ದಾಟುತ್ತಿರುವಾಗ ನಾವಿಕನು ಪಾಂಡವರಿಗೆ ವಿದುರನ ಶುಭ ಹಾರೈಕೆಗಳನ್ನೂ, ಎಚ್ಚರಿಕೆಯಿಂದಿರುವಂತೆ ತಿಳಿಸಿದ ಸಂದೇಶವನ್ನು ಹೇಳಿದನು. ನದಿಯನ್ನು ದಾಟಿಸಿ, ಪಾಂಡವರಿಗೆ ಶುಭ ಕೋರಿ, ತನ್ನ ನೌಕೆಗೆ ಹಿಂದಿರುಗಿದನು

Comments


bottom of page