top of page

ಅರಗಿನ ಮನೆಯಿಂದ ತಪ್ಪಿಸಿಕೊಳ್ಳುವ ಯೋಜನೆ (ಮಹಾಭಾರತ ಕಥಾಮಾಲೆ 54)

14 hours ago
2 min read

ಧರ್ಮಜನು ತನ್ನೊಡನೆಯೇ ಇದ್ದ ಭೀಮನನ್ನು ಕುರಿತು ಹೇಳಿದನು, "ತಮ್ಮಾ! ಈ ಬಹು ಸುಂದರವಾದ ಅರಮನೆಯ ಗೋಡೆಗಳಿಂದ ಹೊಮ್ಮುತ್ತಿರುವ ವಾಸನೆಯನ್ನು ಗಮನಿಸಿದೆಯಾ? ಇದು ನಿಶ್ಚಿತವಾಗಿಯೂ ಅಗ್ನಿವರ್ಧಕ ವಸ್ತುಗಳಿಂದ ಕಟ್ಟಲ್ಪಟ್ಟಿದೆ. ಅರಗು, ಹುಲ್ಲು, ಬಿದಿರು, ಜೊಂಡು, ತುಪ್ಪ ಇವುಗಳನ್ನು ಉಪಯೋಗಿಸಿ ಕಟ್ಟಲ್ಪಟ್ಟಿದ್ದು. ದುಷ್ಟ ದುರ್ಯೋಧನನಿಂದ ನಿಯುಕ್ತನಾದ ಪುರೋಚನನು ನಮ್ಮ ಜೊತೆಯೇ ಇದ್ದು, ನಮ್ಮನ್ನು ದಹಿಸುವುದಕ್ಕಾಗಿಯೇ ಸಮಯ ಸಾಧಿಸುತ್ತಿದ್ದಾನೆ. ನಮ್ಮನ್ನು ನಂಬಿಸಲು ಅವನು ಅನೇಕ ಸನ್ನಾಹಗಳನ್ನು ಮಾಡುತ್ತಿದ್ದಾನೆ. ಚತುರನಾದ ವಿದುರನಿಗೆ ಈ ರಹಸ್ಯವು ತಿಳಿದು, ನನಗೆ ಈ ವಿಷಯವನ್ನು ಆತನು ತಿಳಿಸಿದ್ದನು. ನಮ್ಮ ವಾಸಕ್ಕೆ ಸಿದ್ಧಪಡಿಸುವ ಸೌಧವು ಅಗ್ನಿ ಅಪಾಯದಿಂದ ಕೂಡಿರಬಹುದೆಂದು ವಿದುರನು ಹಿಂದೆಯೇ ಸೂಚಿಸಿದ್ದನು."

ಅದಕ್ಕೆ ಭೀಮನು, "ಅಣ್ಣ! ಈ ಮನೆಯು ಅಗ್ನಿಯ ಅಪಾಯದಿಂದ ಕೂಡಿದೆಯೆಂದಾದರೆ, ನಾವು ಕೂಡಲೇ ಈ ಮನೆಯನ್ನು ತ್ಯಜಿಸಿ, ಹಿಂದೆ ವಾಸ ಮಾಡುತ್ತಿದ್ದ ಮನೆಗೇ ಹೋಗುವುದು ಸೂಕ್ತವಲ್ಲವೇ? ಎಂದನು.

"ಇಲ್ಲ ಭೀಮ! ನಾವು ಈ ಮನೆಯ ವಿಚಾರದಲ್ಲಿ ಸಂಶಯಿತರಾಗಿದ್ದೇವೆಂದು ಪುರೋಚನನಿಗೆ ತಿಳಿಯಕೂಡದು. ಆದುದರಿಂದ ನಾವು ಅತ್ಯಂತ ಜಾಗರೂಕತೆಯಿಂದ ಇಲ್ಲಿಯೇ ವಾಸಿಸಬೇಕು. ಕಾಲವು ಸನ್ನಿಹಿತವಾದ ಕೂಡಲೇ ಇಲ್ಲಿಂದ ತಪ್ಪಿಸಿಕೊಳ್ಳಲು ಮಾರ್ಗವೊಂದನ್ನು ಈಗಲೇ ನಿಶ್ಚಯಿಸಬೇಕು. ನಮ್ಮ ಸಂಶಯವು ಪುರೋಚನನಿಗೆ ತಿಳಿದರೆ, ಧರ್ಮಾಧರ್ಮಗಳ ವಿವೇಚನೆಯಿಲ್ಲದ ಆತ ನಮ್ಮನ್ನು ಕೊಲ್ಲಲು ಬೇರೇನಾದರೂ ಹಂಚಿಕೆ ಹಾಕಬಹುದು. ದುರ್ಯೋಧನನ ನಿರ್ದೇಶನದಂತೆ ಆತನು ಕಾರ್ಯವೆಸಗುವನು. ನಾವೊಂದು ವೇಳೆ ಸುಟ್ಟು ಹೋದರೆ, ಪಿತಾಮಹ ಭೀಷ್ಮನು ದುರ್ಯೋಧನನ ಮೇಲೆ ಕೋಪಗೊಂಡು ಈ ಪಾಪಕಾರ್ಯವನ್ನು ಖಂಡಿಸಬಹುದು. ಆದರೆ, ನಾವು ಸತ್ತ ನಂತರ ಕುರು ಮುಖ್ಯರು ಕುಪಿತರಾದರೂ ನಮಗೇನು ಪ್ರಯೋಜನ? ಅವರು ಸತ್ತವರನ್ನು ಮರೆತು, ಪ್ರಬಲ ದುರ್ಯೋಧನನ ಮೇಲೆ ಕೋಪಿಸದೆಯೂ ಇರಬಹುದು. ಪ್ರಬಲನ ಆಗ್ರಹಕ್ಕೆ ತುತ್ತಾಗದೆಯೂ ಇರಬಹುದು. ಅದು ಹೇಗೆ ಆದರೂ ನಮಗೆ ಅದರಿಂದ ಯಾವ ಪ್ರಯೋಜನವೂ ಆಗಲಾರದು.

ನಾವು ಈಗ ಈ ಅರಮನೆಯಿಂದ ತಪ್ಪಿಸಿಕೊಂಡರೂ, ರಾಜ್ಯ ಲುಬ್ಧನಾದ ದುರ್ಯೋಧನನು ಗುಪ್ತಚರರ ಮೂಲಕ ನಮ್ಮ ಇರುವನ್ನು ಕಂಡುಹಿಡಿದು, ನಮ್ಮನ್ನ ಮುಗಿಸಲು ಮುಂದಾಗುವನು.ದುರ್ಯೋಧನನು ಇಂದು ಸಾರ್ವಭೌಮನು ಆತನಿಗೆ ಮಿತ್ರರ ಸಹಾಯ ಇರುತ್ತದೆ. ಬೊಕ್ಕಸಕ್ಕೆ ಆತನೇ ಒಡೆಯನಾಗಿದ್ದಾನೆ. ಅನಾಥರಂತೆ ಅಲೆದಾಡುವ ನಮಗೆ ಈ ಯಾವ ವಿಧದ ಅನುಕೂಲತೆಗಳೂ ಇಲ್ಲ. ನಮ್ಮನ್ನು ಮುಗಿಸಲು ಆತ ಬೇರೆ ಬೇರೆ ವಿಧಾನಗಳನ್ನು ಅನುಸರಿಸುವನು. ಆದ್ದರಿಂದ ನಾವೀಗ ತಾಳ್ಮೆಯಿಂದಿದ್ದು, ಪುರೋಚನನನ್ನು ದುರ್ಯೋಧನನನ್ನು ವಂಚಿಸಿ, ಇಲ್ಲಿಂದ ತಪ್ಪಿಸಿಕೊಂಡು ಕೆಲಕಾಲ ಅಜ್ಞಾತವಾಸದಲ್ಲಿರಬೇಕು.

ಯುಧಿಷ್ಠಿರನು ಮುಂದುವರಿದನು "ನಾವು ಬೇಟೆಯಾಡುವ ನೆಪದಲ್ಲಿ ಈ ನಗರದ ಹೊರಗೆ ಹೋಗಿ, ಅಲ್ಲಿಂದ ನಾನಾ ಭಾಗಗಳಿಗೆ ಹೋಗುವ ಮಾರ್ಗವನ್ನು ಅರಿಯೋಣ. ಈ ಅರಮನೆಯಿಂದ ಹೊರ ಹೋಗಲು ಅನುಕೂಲವಾಗುವಂತೆ ನಮ್ಮ ಏಕಾಂತ ಮಂದಿರದಿಂದ ಒಂದು ಸುರಂಗವನ್ನು ರಹಸ್ಯವಾಗಿ ನಿರ್ಮಿಸೋಣ. ಬಹಿರಂಗದಲ್ಲಿ ಬಹು ಸಂತೋಷ ತೋರುತ್ತಲಿದ್ದು, ಅಂತರಂಗದಲ್ಲಿ ಅತಿ ಜಾಗರೂಕತೆಯಿಂದ ನಮ್ಮ ಕಾರ್ಯವನ್ನು ಮಾಡುತ್ತಲಿರೋಣ" ಎಂದನು.

ಹೀಗಿರಲೊಂದು ದಿನ ನಿರ್ಜನ ಪ್ರದೇಶದಲ್ಲಿ ಪಾಂಡವರು ಕುಂತಿಯೊಡನೆ ಕುಳಿತಿರುವಾಗ ಒಬ್ಬನು ಅವರಲ್ಲಿಗೆ ಆಗಮಿಸಿ, ತಾನು ವಿದುರನ ಮಿತ್ರನೆಂದೂ, ಸುರಂಗವನ್ನು ನಿರ್ಮಿಸುವುದರಲ್ಲಿ ತಾನು ನಿಪುಣನೆಂದೂ, ಈಗ ಪಾಂಡವರ ಸೇವೆಗಾಗಿ ವಿದುರನಿಂದಲೇ ತಾನು ಕಳುಹಿಸಲ್ಪಟ್ಟವನೆಂದೂ ಹೇಳಿದನು. ಪುರೋಚನನು ಕೃಷ್ಣ ಪಕ್ಷದ ಚತುರ್ದಶಿಯಂದು ರಾತ್ರಿಯ ವೇಳೆಯಲ್ಲಿ ಅರಮನೆಗೆ ಬೆಂಕಿಯಿಟ್ಟು, ಪಾಂಡವರನ್ನು ಕುಂತೀ ಸಮೇತವಾಗಿ ಸುತ್ತುಬಿಡಲು ದುರ್ಯೋಧನನಿಂದ ನಿರ್ದೇಶಿತನಾಗಿದ್ದಾನೆ ಎಂದು ತಿಳಿಸಿದನು. ಪಾಂಡವರು ತಪ್ಪಿಸಿಕೊಳ್ಳಲು ತಾನೇನು ಮಾಡಬೇಕೆಂದು ಯುಧಿಷ್ಠಿರನನ್ನು ಕೇಳಿದನು. ಪಾಂಡವರಿಗೆ ತನ್ನ ಮೇಲೆ ನಂಬಿಕೆಯುಂಟಾಗುವಂತೆ, ವಿದುರ-ಯುಧಿಷ್ಠಿರರು ವಾರಣಾವತಕ್ಕೆ ತೆರಳುವ ಕಾಲದಲ್ಲಿ ಮ್ಲೇಚ್ಛ ಭಾಷೆಯಲ್ಲಿ ನಡೆಸಿದ ಸಂಭಾಷಣೆಯನ್ನು ನೆನಪಿಸಿದನು.

ತಾನು ವಿದುರನೊಂದಿಗೆ ಮ್ಲೇಚ್ಛ ಭಾಷೆಯಲ್ಲಿ ನಡೆಸಿದ ಸಂಭಾಷಣೆಯನ್ನು ನೆನಪಿಸಿದ್ದರಿಂದ ಆ ವ್ಯಕ್ತಿಯು ವಿದುರನ ಮಿತ್ರನೆಂಬುದರಲ್ಲಿ ಯುಧಿಷ್ಠಿರನಿಗೆ ಯಾವುದೇ ಸಂದೇಹ ಇಲ್ಲದಂತಾಯಿತು. ಆತನ ಕುರಿತಾಗಿ ಆತ್ಮೀಯತೆ ಮಾಡಿತು.

ಹೊಸ ಮನುಷ್ಯನಲ್ಲಿ ಯುಧಿಷ್ಠಿರನು ಹೇಳಿದನು, "ಅಯ್ಯಾ! ವಿದುರ ಮಿತ್ರನಾದ ನೀನು ನಮಗೆ ಅತ್ಯಾಪ್ತನಾಗಿರುವೆ. ಅಗ್ನಿ ಸ್ನೇಹಿಯಾದ ವಸ್ತುವಿನಿಂದ ನಿರ್ಮಿತವಾದ, ಏಕ ದ್ವಾರವನ್ನು ಹೊಂದಿರುವ, ಆಯುಧಾಗಾರದ ಸಮೀಪವೇ ನಿರ್ಮಿತವಾದ ಈ ಅರಮನೆಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಸುರಂಗವೊಂದನ್ನು ನಿರ್ಮಿಸು. ಪುರೋಚನನಿಗೆ ಈ ವಿಷಯವು ತಿಳಿಯದಂತೆ ರಹಸ್ಯವಾಗಿರಲಿ".

ಇದಕ್ಕೆ ಸಮ್ಮತಿಸಿದ ವಿದುರ ಮಿತ್ರನು ತಕ್ಷಣ ಕಾರ್ಯಾರಂಭ ಮಾಡಿದನು. ಕೋಟೆಯ ಪಕ್ಕದಲ್ಲಿನ ಕಂದಕವನ್ನು ಸರಿ ಮಾಡುವ ನೆಪ ಮಾಡಿಕೊಂಡು, ಒಂದು ದೊಡ್ಡ ಸುರಂಗವನ್ನು ನಿರ್ಮಿಸಿದನು. ಅರಮನೆಯ ನಡುಭಾಗದಿಂದ ಕೊರೆಯಲ್ಪಟ್ಟಿದ್ದ ಆ ಸುರಂಗವು ನೆಲಕ್ಕೆ ಸಮನಾಗಿದ್ದ ದ್ವಾರದಿಂದ ಮುಚ್ಚಲ್ಪಟ್ಟಿತ್ತು. ಪುರೋಚನನಿಗೆ ಇದರ ಸಣ್ಣ ಸುಳಿವೂ ಇರಲಿಲ್ಲ.

Comments


bottom of page