top of page

ಅರಗಿನ ಮನೆಗೆ ತೆರಳಿದ ಪಾಂಡವರು (ಮಹಾಭಾರತ ಕಥಾಮಾಲೆ 53)

1 hour ago
2 min read

ಈ ಕಾರಣಗಳಿಂದ ಈ ಶ್ಲೋಕದ ಅರ್ಥವು ಈ ರೀತಿ ಆಗುತ್ತದೆ "ಆ ವಾರಣಾವತದಲ್ಲಿರುವ ಮನೆಯನ್ನು ಅಗ್ನಿಯಿಂದ ಸುಡುವ ಅರಗು ಮುಂತಾದ ವಸ್ತುಗಳ ಸಮುದಾಯದಿಂದ ಮಾಡಿದೆ. ಅದಕ್ಕೆ ತಕ್ಕ ಪ್ರತಿಬಂಧಕೋಪಾಯವನ್ನು ತಿಳಿದಿವನನ್ನು ಶತ್ರುಗಳು ಕೊಲ್ಲಲಾರರು".

ವಿದುರನು ಈ ಅರಗಿನ ಮನೆಯು ಸುಲಭವಾಗಿ ಅಗ್ನಿಗೆ ಆಹುತಿಯಾಗುವ ವಸ್ತುಗಳಾದ ಒಣ ಹುಲ್ಲು, ಮರದ ಪುಡಿಯೇ ಮೊದಲಾದ ವಸ್ತುಗಳಿಂದ ಮಾಡಲ್ಪಟ್ಟಿದೆಯೆಂದೂ, ಅಲ್ಲಿ ವಾಸಿಸುವಾಗ ಅತ್ಯಂತ ಜಾಗರೂಕತೆಯಿಂದ ಇದ್ದು, ಅಗ್ನಿಯು ಆವಿರ್ಭವಿಸಿದ ಸಂದರ್ಭದಲ್ಲಿ ಸುರಂಗದಲ್ಲಿ ಸೇರಿಕೊಂಡು ರಕ್ಷಣೆ ಮಾಡಿಕೊಳ್ಳಬೇಕೆಂದೂ ಸೂಚ್ಯವಾಗಿ ತಿಳಿಸಿದನು. ಅಗ್ನಿಯು ಅರಣ್ಯವನ್ನೆಲ್ಲ ಸುಟ್ಟರೂ ಬಿಲದಲ್ಲಿರುವ ಸರ್ಪವು ಸುರಕ್ಷಿತವಾಗಿರುವ ಸಾದೃಷ್ಯವನ್ನು ನೀಡಿದನು.

ಆಪ್ತರಲ್ಲದವರು (ಶತ್ರುಗಳು) ನಮ್ಮ ಮೇಲೆ ಪ್ರಯೋಗಿಸಬಹುದಾದ ಅಲೋಹ ಶಸ್ತ್ರ (ಅಗ್ನಿ ಮತ್ತು ವಿಷ) ವನ್ನೇ ಅವರ ಪ್ರತಿಧ್ವಂಸನಕ್ಕಾಗಿ ಉಪಯೋಗಿಸಬೇಕೆಂದು ಸೂಚ್ಯವಾಗಿ ತಿಳಿಸಿದನು. ಅಂದರೆ, ಅರಗಿನಾಲಯಕ್ಕೆ ಪಾಂಡವರೇ ಬೆಂಕಿ ಇಕ್ಕಬಹುದೆಂದು ತಿಳಿಸಿದನು. ನಂತರ ಉಭಯ ಪಾರ್ಶ್ವಗಳಲ್ಲಿಯೂ ರಂಧ್ರಗಳನ್ನು ಹೊಂದಿದ ಸುರಂಗದ ಮಾರ್ಗವಾಗಿ ಹೊರಬಂದು, ಅಲ್ಲಲ್ಲಿ ಸಂಚರಿಸಿ, ಬೇರೆಯ ದೇಶಕ್ಕೆ ಹೋಗುವ ಮಾರ್ಗವನ್ನು ಕಂಡುಕೊಳ್ಳಬೇಕೆಂದೂ, ಇದಕ್ಕೆ ಬೇಕಾದ ದಿಕ್ಕನ್ನು ನಕ್ಷತ್ರಗಳ ಸಹಾಯದಿಂದ ತಿಳಿಯಬೇಕೆಂದೂ ತಿಳಿಸಿದನು. ವಿದುರನು ಯುಧಿಷ್ಠಿರನಿಗೆ ಬೇರೆ ದೇಶಕ್ಕೆ ತೆರಳಬೇಕೆಂದು ಸೂಚಿಸಿದನೇ ಹೊರತು ಹಸ್ತಿನೆಗೆ ಹಿಂದಿರುಗಿ ಎನ್ನಲಿಲ್ಲ. ಕಾಮ ಕ್ರೋಧಾದಿಗಳಿಗೆ ಒಳಗಾಗದೇ, ಪಂಚೇಂದ್ರಿಯಗಳನ್ನು ಸ್ವಾಧೀನದಲ್ಲಿರಿಸಿಕೊಂಡು ಮುನ್ನಡೆಯಬೇಕೆಂದು ಸೂಚಿಸಿದನು.

ವಿದುರನ ನೀತಿ ವಾಕ್ಯಗಳನ್ನು ಕೇಳಿದ ಯುಧಿಷ್ಠಿರನು, ' ನೀನು ಹೇಳಿದುದೆಲ್ಲವನ್ನೂ ನಾನು ಗ್ರಹಿಸಿದೆನು ' ಎಂದನು.

ಇದನ್ನು ಕೇಳಿ, ವಿದುರನು ಸಂತೋಷದಿಂದ ಪಾಂಡವರ ರಥವನ್ನು ಪ್ರದಕ್ಷಿಣೆ ಮಾಡಿ, ಮನಃ ಪೂರ್ವಕವಾಗಿ ಅವರನ್ನು ಆಶೀರ್ವದಿಸಿ, ಹಸ್ತಿನೆಗೆ ಮರಳಿದನು.

ವಿದುರ ಯುಧಿಷ್ಠಿರರ ಸಂಭಾಷಣೆಯನ್ನು ತಿಳಿಯುವ ಕುತೂಹಲ ತಾಳಿದ ತಾಯಿ ಕುಂತಿಗೆ ಯುಧಿಷ್ಠಿರನು ಸಂಕ್ಷಿಪ್ತವಾಗಿ ತಮ್ಮ ಸಂಭಾಷಣೆಯ ಸಾರವನ್ನು ತಿಳಿಸಿದನು.

ಪಾಂಡವರು ಫಾಲ್ಗುಣ ಮಾಸದ ಅಷ್ಟಮಿಯ ದಿನ ರೋಹಿಣೀ ನಕ್ಷತ್ರದಲ್ಲಿ ವಾರಣಾವತವನ್ನು ಸೇರಿದರು. ಬಂದ ರಾಜಕುಮಾರರಿಗೆ ಪುರ ಜನರು ಭವ್ಯ ಸ್ವಾಗತವನ್ನು ನೀಡಿದರು. ವಾರಣಾವತದ ಪ್ರಜೆಗಳ ಆನಂದಕ್ಕೆ ಪಾರವೇ ಇರಲಿಲ್ಲ. ಪರಾಕ್ರಮಿಗೂ, ಸದ್ಗುಣಶೀಲರೂ ಆದ ಪಾಂಡವರು ತಮ್ಮ ನಗರಕ್ಕೆ ಬಂದರೆಂದು ಅಲ್ಲಿನ ಪ್ರಜೆಗಳು ಹರ್ಷಿಸಿದರು. ಪಾಂಡವರ ಆಗಮನದ ವಾರ್ತೆಯನ್ನು ತಿಳಿದ ವಾರಣಾವತದ ಪ್ರಜೆಗಳು ಮಾತ್ರವಲ್ಲದೆ, ಸುತ್ತಲಿನ ಊರಿನ ಜನರೂ ತಂಡೋಪತಂಡವಾಗಿ ಆಗಮಿಸಿ, ಮಂಗಳ ದ್ರವ್ಯಗಳೊಡನೆ, ಜಯಕಾರಗಳ ನಡುವೆ ಪಾಂಡವರಿಗೆ ಸ್ವಾಗತ ಕೋರಿದರು. ಜನಸ್ತೋಮದ ಜೈಕಾರಗಳ ನಡುವೆ, ಇಂದ್ರನಂತೆಯೇ ಪ್ರಕಾಶಿಸುತ್ತಿದ್ದ ಯುಧಿಷ್ಠಿರನು ಪರಿವಾರ ಸಮೇತನಾಗಿ, ಸುಂದರವಾಗಿ ಅಲಂಕರಿಸಿಲ್ಪಟ್ಟಿದ್ದ ನಗರವನ್ನು ಪ್ರವೇಶಿಸಿದನು. ಮೊದಲು ಅನುಷ್ಠಾನ ನಿರತರಾಗಿದ್ದ ಶ್ರೋತ್ರಿಯರ ಮನೆಗಳಿಗೆ ತೆರಳಿ, ಕುಶಲ ಪ್ರಶ್ನೆಗಳನ್ನು ಮಾಡಿ, ಅವರಿಂದ ಆಶೀರ್ವಾದ ಪಡೆದನು. ನಂತರ ನಗರದ ಆಡಳಿತ ವರ್ಗವನ್ನು ಪರಿಚಯ ಮಾಡಿಕೊಂಡನು. ಜನ ನಾಯಕರ ಪ್ರಾರ್ಥನೆಯಂತೆ ಆಡಳಿತದ ವಿವಿಧ ಸ್ತರಗಳಲ್ಲಿನ ಎಲ್ಲರ ಮನೆಗಳಿಗೆ ತೆರಳಿ, ಯೋಗ ಕ್ಷೇಮವನ್ನು ವಿಚಾರಿಸಿದನು. ನಂತರ, ತಮ್ಮನ್ನು ಅನುಸರಿಸಿ ಬರುತ್ತಿದ್ದ ಕುರುಮಂತ್ರಿಯಾದ ಪುರೋಚನನ ಜೊತೆಗೆ ತಮಗಾಗಿ ಸಿದ್ಧಪಡಿಸಿದ್ದ ಅರಮನೆಗೆ ಪಾಂಡವರು ತೆರಳಿದರು.

ಈ ಅರಮನೆಯಲ್ಲಿ ಪುರೋಚನನು ಪಾಂಡವರಿಗೆ ಬೇಕಾದ ಆಸನ-ಭಕ್ಷ್ಯ-ಭೋಜ್ಯ-ಲೇಹ್ಯ-ಚೋಷ್ಯ-ಪಾನೀಯ-ಶಯನಾದಿ ಸಕಲ ಸುಖೋಪಭೋಗ ವಸ್ತುಗಳನ್ನೂ ಸಿದ್ಧಗೊಳಿಸಿದ್ದನು. ಹೀಗೆ ಪಾಂಡವರ ವಾರಣಾವತವಾಸವು ಸುಖಮಯವಾಗಿಯೇ ಪ್ರಾರಂಭವಾಯಿತು.

ಹತ್ತು ರಾತ್ರಿಗಳು ಕಳೆದವು. ಪಾಂಡವರ ಜೊತೆಗೇ ಇಂದ ಪುರೋಚನನು ಯುಧಿಷ್ಠಿರನಲ್ಲಿ ಹೇಳಿದನು, "ಯುಧಿಷ್ಠಿರ! ನಿಮಗಾಗಿ ಅತಿ ಸುಂದರವಾದ 'ಶಿವಗೃಹ' ನಾಮಕವಾದ ನೂತನ ಅರಮನೆ ಸಿದ್ಧವಾಗಿದೆ ಪ್ರವೇಶ ಮಾಡಬೇಕು".

ಅಮಂಗಳಕರವಾದ ಮನೆಯೇ ಅದಾಗಿದ್ದರೂ, ಪುರೋಚನನು ಅದಕ್ಕೆ 'ಶಿವಗೃಹ' 'ಮಂಗಳಕರವಾದ ಮನೆ' ಎಂದೇ ಹೆಸರಿಟ್ಟಿದ್ದನು. ಗುಹ್ಯಕರು ಕೈಲಾಸದಲ್ಲಿನ ಶಿವಾಲಯವನ್ನು ಪ್ರವೇಶಿಸುವಂತೆ ಪಾಂಡವರು ಈ ನೂತನ ಅರಮನೆಯನ್ನು ಪ್ರವೇಶಿಸಿದರು.

ಬಹು ಸೊಗಸಾಗಿದ್ದ ಈ ಅರಮನೆಯನ್ನು ಯುಧಿಷ್ಠಿರನು ಪರೀಕ್ಷಕ ದೃಷ್ಟಿಯಿಂದ ನೋಡತೊಡಗಿದನು. ಒಂದು ವಿಧವಾದ ವಾಸನೆಯು ಆ ಪ್ರದೇಶದಲ್ಲಿ ಹೊರಹೊಮ್ಮುತ್ತಿರುವುದನ್ನು ಗ್ರಹಿಸಿದನು. ಆ ವಾಸನೆಗೆ ಕಾರಣವೇನೆಂದು ಯುಧಿಷ್ಠಿರನು ಒಡನೆಯೇ ಗ್ರಹಿಸಿದನು.

Comments


bottom of page