top of page

ತಾಳಮದ್ದಳೆಯ ಕ್ರಮಗಳು - 8 (ಆಖ್ಯಾನ: ಪುತ್ರಕಾಮೇಷ್ಠಿ

ಪುತ್ರಕಾಮೇಷ್ಠಿ (ದಶರಥ-ಕೈಕೇಯಿ)


ಇದಿರೆದ್ದು ಬಂದು ಸತ್ಕರಿಸುತ ಕೈಕೇಯಿ ಮುದದಿ ಕಾಂತನ ಮನ್ನಿಸಿ|

ಚದುರೆ ತಾ ನಸುನಗೆಯಿಂದ ಪ್ರಶ್ನಿಸಿದಳು ಹದನವರಿಯಲೆಟ್ಟಸಿ||


ಕೈಕೇಯಿ: ಯೋಚಿಸಿದಂತೆ ಜೀವನದ ಅನುಭವವಾದರೆ ಅದೇ ಸುಖ ವೈಭೋಗ ಯೋಚಿಸಿದ್ದಕ್ಕಿಂತಲೂ ಮಿಗಿಲಾದ ಜೀವನ ಅನುಭವವಾದರೆ ಅದು ಮಹಾಭಾಗ್ಯ. ನನ್ನ ಜೀವನದ ಮಹಾಭಾಗ್ಯ ಎಂದೇ ಸಂತೋಷಗೊಂಡಿದ್ದೇನೆ. ಆರ್ಯಾವರ್ತದಲ್ಲಿಯೇ ಪ್ರಖ್ಯಾತವೂ ಪವಿತ್ರವೂ ಆದ ಸೂರ್ಯವಂಶಕ್ಕೆ ಸೊಸೆಯಾಗಿ, ಧೀರ-ಮಹಾ-ಧಾರ್ಮಿಕ ಚಕ್ರವರ್ತಿಯಾದ ದಶರಥ ಚಕ್ರವರ್ತಿಗಳ ಪ್ರೀತಿಯ ಪತ್ನಿಯಾದೆ. ಓ.... ಮಹಾರಾಜರೇ ಇತ್ತ ಬರುತ್ತಿರುವ ಸೂಚನೆ, ಓಹ್ ಬನ್ನಿ ಬನ್ನಿ ಮಹಾಪ್ರಭುಗಳೇ ಪಾದಪದ್ಮಗಳಿಗೆ ಶಿರಸಾ ವಂದನೆ.


ದಶರಥ: ಕೈಕೇಯಿ ನಿನಗೆ ಮಂಗಳವಾಗಲಿ.


ಕೈಕೇಯಿ: ನಿಮಗಿಷ್ಟವಾದ ಎಲ್ಲಾ ಆತಿಥ್ಯವಿದೆ ಸ್ವೀಕರಿಸಿ ಇಲ್ಲಿಯೇ ವಿಶ್ರಮಿಸಿ.


ದಶರಥ: ಕೈಕೇಯಿ ಇಷ್ಟೆಲ್ಲ ಉಪಚಾರ ಯಾಕೆ, ನಾನೇನು ಅತಿಥಿಯೇನೆ, ವಿಶ್ರಮಿಸಲು ಸಮಯಾನುಕೂಲವಿಲ್ಲ ಕಾರ್ಯಬಾಹುಳ್ಯವಿದೆ.



ಕೈಕೇಯಿ: ನಿಮ್ಮ ಮಾತಿನ ಅರ್ಥ ನನಗಾಗಲಿಲ್ಲ!


ಅಹಹಾ ಏನಿದೀ ವಿಶೇಷ| ಗ್ರಹಿಸಲೆನ್ನ ಮನಕೆ ತೋಷ|

ಸುಹಿತದಿಂದ ಹೇಳು ಬಗೆಯ ಮಹಿಮೆಯರಿವೆನು ||1||


ಕೈಕೇಯಿ: ನೀವು ಬರುವ ವಿದಾನದಲ್ಲಿ ಇವತ್ತು ವೇಗವಿತ್ತು.


ದಶರಥ: ನಾನು ಯಾವತ್ತೂ ನಿನ್ನಲ್ಲಿಗೆ ಬರುವಾಗ ಬೇಗನೆ ಬರ್ತಿದ್ದೆ.


ದಶರಥ: ಅದು ಹೌದು, ಆದರೆ ಇವತ್ತು ಇಲ್ಲಿಯೇ ನಿಲ್ಲುವ ಭಾವವಿಲ್ಲ. ಮುಖ ಪ್ರಸನ್ನ ಗಂಭೀರವಾಗಿದೆ. ವಿಶೇಷವಾಗಿ ಧೈರ್ಯದ ತೇಜಸ್ಸು ಕಾಣುತ್ತಿದೆ.


ದಶರಥ: ಮತ್ತೆ ಪ್ರೀತಿಯ ಹೆಂಡತಿಯ ಎದುರಿಗೆ ಬರುವುದಲ್ಲವೇನೆ.


ಕೈಕೇಯಿ: ಸಾಕು ವಿನೋದ ಏನು ವಿಶೇಷ ನೀವು ಹೇಳಿದರೆ ನನಗೂ ಸಂತೋಷ. ಕಿರೀಟ ಹೊತ್ತ ತಲೆಗೆ ಕಿರಿಕಿರಿ ಸಾವಿರ ಎಂಬ ಮಾತಿದೆ. ಅಂತಹ ಗಂಭೀರಲಾಹುಳ್ಯದ ಕಾರ್ಯ ಹೇಳಿದರೆ ಅದನ್ನು ನಿರ್ವಹಿಸುವ ನಿಮ್ಮ ಘನತೆ ಮಹಿಮೆ ತಿಳಿದರೆ ನನಗೆ ಬಲು ಹೆಮ್ಮೆ. ಹೇಳಿ ಯಾವ ಮಹಾಕಾರ್ಯಕ್ಕೆ ಹೊರಟಿದ್ದೀರಿ.


ದಶರಥ: ಆಹಾ ಎಷ್ಟು ವಿನಯವೇ ನಿನಗೆ, ಹೇಳಲೇಬಾರದು ಎಂದು ಬಂದರೂ, ನಿನ್ನ ಮಾತು ಕೇಳಿದ ಮೇಲೆ ಹೇಳದೆ ಹೋಗಲಿಕ್ಕಾಗುವುದಿಲ್ಲ ಎಲೈ ನನ್ನ ಮೋಹನೇ,


ಸುಲಲಿತಾಂಗಿ ಕೈಕೆ ಕೇಳೆ ಛಲದೊಳೇರುತಿಗ ಮೇಲೆ|

ಖಳರ ಸದೆದು ತ್ರಿದಿವವನ್ನು ಸಲಹಿ ಬರುವೆನೆ||


ದಶರಥ: ಪ್ರಿಯೆ ನನಗೆ ಮೇಲೆ ಬರುವುದಕ್ಕೆ ಕರೆ ಬಂದಿತು.


ಕೈಕೇಯಿ: ಅಯ್ಯೋ ಇದೆಂತಹ ಮಾತು ಇನ್ನೂ ಸಾವಿರಾರು ವರ್ಷ ನೀವಿರಬೇಕು.


ದಶರಥ: ವಾ ವಾ ಸ್ವಲ್ಪ ತಡಿ ತಡಿ, ಎಲ್ಲಾ ಮಾತಿಗೂ ಒಂದೇ ಅರ್ಥ ಅಲ್ಲ. ಇವತ್ತಿನ ಸಭೆಗೆ ದೇವೇಂದ್ರನ ಸೂಚನೆಯಂತೆ, ಮಾತು ಬಂದ ದೇವಲೋಕಕ್ಕೆ ದುರುಳರ ದಾಳಿಯಾಗಿದೆ. ನನ್ನ ಸಹಾಯ ಬೇಕೆಂದು ದೇವೇಂದ್ರ ವಿನಂತಿಸಿದ್ದಾನೆ. ಖಳರನ್ನ ತರಿವ ಛಲದಿಂದ ದೇವಲೋಕಕ್ಕೆ ಹೋಗಿ ಬರ್ತೇನೆ. ದುರುಳರನ್ನು ತರಿದು ಸ್ವರ್ಗ ಸಂಪದವನ್ನು ರಕ್ಷಿಸುತ್ತೇನೆ. ಮಂಗಳಾಕ್ಷತೆ ಇಟ್ಟು ಕಳುಹಿಸಿಕೊಡು.

Comments


bottom of page