ತಾಳಮದ್ದಳೆಯ ಕ್ರಮಗಳು - 6 (ಆಖ್ಯಾನ: ಪುತ್ರಕಾಮೇಷ್ಠಿ)
- Ramanand Hegde Hellekoppa

- Jul 30
- 2 min read
ಹಿಂದಿನ ಸಂಚಿಕೆಯಲ್ಲಿ ದೇವ ಒಡ್ಡೋಲಗ, ಹಾಗೂ ರಾಕ್ಷಸರ ಬಡ್ಡೋಲಗ, ಹಾಗೂ ಪೀಠಿಕೆಯನ್ನು ತಿಳಿದಾಯ್ತು. ದೇವೇಂದ್ರ ಅಥವಾ ದೇವತೆಗಳ ವಿಷಯ ನಿರ್ವಹಣೆಯಲ್ಲಿ ಹೆಚ್ಚಿನದಾಗಿ ಯಾವುದೇ ಪರಂಪರೆಯ ಅಥವಾ ಕುಲ ವಿಶೇಷಗಳನ್ನು ಹೇಳುವ ಆಳವಾದ ವಿಮರ್ಶೆಯೋ, ಸಂಗ್ರಹವೋ ಬೇಡ. ರಾಕ್ಷಸರ ವಂಶಾವಳಿಯನ್ನು ವಿವರಿಸುವಲ್ಲಿಯೂ ಇದೇ ತೊಡಕಿದೆ.
ವಿಶೇಷವಾದ ವಿವರಣೆ ನಮಗೆ ಲಭ್ಯವಿರುವುದಿಲ್ಲ. ಕೆಲವೇ ರಾಕ್ಷಸರ ಬಗ್ಗೆ, ಕುಲಪರಂಪರೆಯ ವಿಚಾರ ನಮಗೆ ಸಿಗುತ್ತದೆ. ಅದೇ ಆಧಾರದಲ್ಲಿ ಸಾಮಾನ್ಯವಾಗಿ ಎಲ್ಲ ರಾಕ್ಷಸರ/ದೇವತೆಗಳ ಕುಲ-ಪರಂಪರೆ ವಿಶೇಷ ಮಹಿಮೆಗಳನ್ನು ವಿವರಿಸಲಾಗುತ್ತದೆ. ಆದರೆ ಮಾನವ ರಾಜರುಗಳ - ರಾಜ್ಯಗಳ ಬಗ್ಗೆ ವಿವರಿಸುವಾಗ ಹೆಚ್ಚಿನ ಮಾಹಿತಿ ಇರಲೇಬೇಕು. ಅದರಲ್ಲೂ ಸೂರ್ಯ ವಂಶ, ಚಂದ್ರ ವಂಶ, ಅದರ ಕವಲುಗಳು, ಆ ವಂಶಗಳಲ್ಲಿ ಆಳಿದ ಮಹಾರಾಜರ ಸಾಧನೆಗಳನ್ನು, ವಿಶೇಷ ವ್ಯಕ್ತಿತ್ವಗಳ ಬಗ್ಗೆ ವಿಚಾರ ಮಾಹಿತಿಗಳನ್ನು ಸಂಗ್ರಹಿಸಲೇಬೇಕು. ಈ ಸೂರ್ಯವಂಶ, ಚಂದ್ರ ವಂಶ, ಭೃಗುವಂಶ, ಹೈಹಯವಂಶ, ಹಾಗೂ ಬೇರೆಬೇರೆ ವಂಶಾನುಕ್ರಮವನ್ನು ಇನ್ನೊಂದು ಸಂಚಿಕೆಯಲ್ಲಿ ತಿಳಿಯೋಣ. ಈಗ ಸದ್ಯಕ್ಕೆ ಕಥೆಗೆ ಅವಶ್ಯವಿರುವಷ್ಟೇ ತಿಳಿಯೋಣ.

ದಶರಥನ ಒಡ್ಡೋಲಗ
ಶ್ರೀನಿಳಯಕೆಣೆಯೆನಿಪಯೋಧ್ಯಾIಕ್ಷೋಣಿಯನು ತಾ ಸಲಹುತII ಮಾನವಾಗ್ರಣಿಯೆನಿಸಿ ಮೆರೆದಿರೆ|ಸಾನುರಾಗದಿ ದಶರಥII
[ಈ ಪದ್ಯ, ಕವಿಯು ದಶರಥನ ಪಾತ್ರವನ್ನು ಪರಿಚಯ ಮಾಡಿಕೊಡುವುದೇ ಆಗಿದೆ. ಈ ಪದ್ಯದ ಮುಂದಿನ ಪದ ದಶರಥ ನೇರವಾಗಿ ತನ್ನ ಸಾಂಸಾರಿಕವಾದ ವಿಚಾರ ಹೇಳುವುದೇ ಆಗಿರುವುದರಿಂದ ಈ ಮೊದಲ ಪದವನ್ನು ವಿವರಣೆಗಾಗಿ/ಪೀಠಿಕೆಗಾಗಿ ಬಳಸುವುದು ರೂಢಿ. ಇಲ್ಲಿ ಮುಖ್ಯ ವಿಷಯದ ಶಬ್ದಗಳು ಶ್ರೀನಿಳಯ, ಅಯೋಧ್ಯೆ, ಮಾನವಾಗ್ರಣಿ. ಪ್ರತಿ ಪಾತ್ರಕ್ಕೂ ಆರಾಧ್ಯದೇವರು, ಪ್ರತಿ ರಾಜ್ಯಕ್ಕೂ-ರಾಜರಿಗೂ ಧ್ವಜ, ನದಿ, ಪರ್ವತ, ಋಷಿ, ಪುರೋಹಿತ, ಇವು ಸಾಮಾನ್ಯ ಪರಿಚಯದ ವಿಷಯಗಳಾಗಿರುತ್ತವೆ.]
ದಶರಥ: ಹುಟ್ಟಿದ ಪ್ರತಿಯೊಬ್ಬನು ತನ್ನ ಮರಣ ನಂತರ ವೈಕುಂಠವನ್ನೇ ಸೇರಬೇಕೆಂದು ಅಪೇಕ್ಷಿಸುತ್ತಾನೆ. ಹಾಗೆ ಬಯಸುವುದೇ ಮನುಷ್ಯ ಜೀವನದ ಸಾರ್ಥಕ ಲಕ್ಷಣ. ವೈಕುಂಠವೆಂದರೆ ಮೋಕ್ಷದ ಸ್ಥಾನ. ವಿಷ್ಣು-ಲಕ್ಷ್ಮಿಯರ ನಿವಾಸ ಸ್ಥಾನ. ಜನನ-ಜರಾ-ಮರಣಗಳಿಲ್ಲದ ಅನಂತ ಸುಖದ ಸ್ಥಾನ. ದಿವ್ಯವೂ, ಶ್ರೇಷ್ಠವಾದದ್ದೆಲ್ಲವೂ ಶ್ರೀ. ಅದು ವೈಕುಂಠದಲ್ಲಿದೆ. ಹಾಗಾಗಿ ಅದು ಶ್ರೀನಿಳಯ. ಇದು ಮನುಷ್ಯ, ಪರಗತಿಯನ್ನು ಹೊಂದಿದ ಮೇಲೆ ಪಡೆಯುವುದು. ಬದುಕಿರುವಾಗಲೇ ಈ ಭೂಮಿಯಲ್ಲಿಯೇ,ಅಂತಹ ಶ್ರೀನಿಲಯ ಸ್ಥಾಪಿಸಬಹುದೇ? ಸಾಧ್ಯವಿದೆ ಎಂದು, ಸೂರ್ಯವಂಶೀಯ ಅರಸರು ಸಾಧಿಸಿದ್ದಾರೆ. ಈ ಭೂಲೋಕದಲ್ಲಿ, ಸಾಕ್ಷಾತ್ ಮಹಾವಿಷ್ಣುವಿನಿಂದಲೇ ನಿರ್ಮಿತವಾದ ಅಯೋಧ್ಯೆ. ವರ್ತಮಾನದಲ್ಲಿ ಶ್ರೀ ನಿಲಯಕ್ಕೆ ಸಮಾನವಾಗಿದೆ, ಎಂದು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಇಲ್ಲಿಯವರೆಗೆ, ಈ ಅಯೋಧ್ಯೆಯನ್ನು ಆಳಿದ ಅನೇಕ ಮಹಾರಾಜರು, ಚಕ್ರವರ್ತಿಗಳು ಶ್ರೀನಿಲಯಕ್ಕೆಣೆಯೆಂಬ ಪಾವಿತ್ರ್ಯವನ್ನು, ಪ್ರಸಿದ್ಧಿಯನ್ನು ಹಾಗೂ ವಾಸ್ತವಿಕ ಸತ್ಯವನ್ನು ಕಾಪಾಡಿಕೊಂಡು ಬರುವಲ್ಲಿ, ಬಹಳ ಶ್ರಮವಹಿಸಿದ್ದಾರೆ. ತಪಸ್ಸಿನಂತೆ ಕಾರ್ಯ ಸಾಧಿಸಿದ್ದಾರೆ. ಇಂತಹ ಮಹಾವಂಶದಲ್ಲಿ ಅಜಮಹಾರಾಜನ ಮಗನಾಗಿ ಹುಟ್ಟಿ, ಈ ಅಯೋಧ್ಯೆಯನ್ನು ವರ್ತಮಾನದಲ್ಲಿ ಪಾಲಿಸುತ್ತಿರುವ ನಾನು, ದಶರಥ ಚಕ್ರವರ್ತಿ ಎಂದು ಕರೆಸಿಕೊಂಡಿದ್ದೇನೆ. ಸಂಸ್ಕಾರ ಬಲದಿಂದ ಬಂದ ಗುಣಾಡ್ಯತೆಯ ಕಾರಣದಿಂದ ಮಾನವಾಗ್ರಣಿ ಎಂದು ಹೊಗಳುತ್ತಿದ್ದಾರೆ. ಇವೆಲ್ಲ ಯಾವುದೋ ಜನ್ಮದ ಪುಣ್ಯದ ಫಲವೆಂದು ನಂಬಿದ್ದೇನೆ. ಅಯೋಧ್ಯೆಯನ್ನು ಪರಿಪಾಲಿಸುವಲ್ಲಿ ಪುರೋಹಿತರಾದ ವಸಿಷ್ಠರ ಧಾರ್ಮಿಕ ಮಾರ್ಗದರ್ಶನವಿದೆ. ಆಡಳಿತ ಸುಖವು, ಸಾಧನಾತ್ಮಕವೂ ಆಗಿ, ಪ್ರಜೆಗಳೆಲ್ಲ ಸುಖಿಗಳಾಗಿರುವುದಕ್ಕೆ ಸುಮಂತ್ರಾದಿ ಅಷ್ಟಮಂತ್ರಿಗಳ ಚಾಣಾಕ್ಷ ಬುದ್ಧಿವಂತಿಕೆ, ಕಾರ್ಯತರ್ಪರತೆಯೂ ಸಹಾಯಕವಾಗಿದೆ. ಬಲಿಷ್ಠವಾದ ಸೇನೆ ಅಯೋಧ್ಯೆ ಹೆಸರಿಗೆ ತಕ್ಕಂತೆ, ಯಾರಿಂದಲೂ ಜಯಿಸಲಾಗದಂತೆ ರಕ್ಷಿಸುತ್ತಿದೆ. ಅಯೋಧ್ಯೆ ಎಲ್ಲರಿಗೂ ತೆರೆದ ಬಾಹುಗಳ ಆಹ್ವಾನವನ್ನು ನೀಡುತ್ತಿದೆ. ಅದಕ್ಕಾಗಿಯೇ ಕೇದಾರ ವೃಕ್ಷದ ಚಿಹ್ನೆಯನ್ನು ರಾಜಧ್ವಜದಲ್ಲಿ ಅಂಕಿತಗೊಳಿಸಿದ್ದೇವೆ. ರಾಜ್ಯದ ಆರಾಧ್ಯ ದೇವನಾಗಿ ಶ್ರೀರಂಗನಾಥನನ್ನು ಸಮಸ್ತರೂ ಆರಾಧಿಸುತ್ತಿದ್ದಾರೆ. ಧಾರ್ಮಿಕವಾಗಿ ನಿಷ್ಣಾತರಾಗಿದ್ದೇವೆ. ಸಾಮಾಜಿಕ ಜೀವನ ಕ್ರಮದಲ್ಲಿ ಮಾದರಿಯಾಗಿದ್ದೇವೆ. ಹಾಗಾಗಿ ಅಯೋಧ್ಯೆ ಪರಮಪವಿತ್ರವಾಗಿ, ಮೋಕ್ಷಪ್ರದ ನೆಲೆವೀಡಾಗಿದೆ. ಸಂತೃಪ್ತಿ, ಸುಖಕ್ಕೆ ಕೊರತೆ ಇಲ್ಲ. ಸಾಂಸಾರಿಕವಾಗಿ ಹೇಳುವುದಾದರೆ....
ಕೋಸಲೇಶ್ವರ ಸುತೆಯು ಸತಿ ಮ|ತ್ತಾ ಸುಮಿತ್ರೆಯ ವರಿಸಿದII ಭಾಷೆಯನಿತ್ತಾ ಕೈಕೆಯನು ಪರಿ |ತೋಷದಿಂ ಸಂಗ್ರಹಿಸಿದII
ದಶರಥ: ದಿಗ್ವಿಜಯದ ಸಂದರ್ಭದಲ್ಲಿ, ಕೋಸಲ ದೇಶದ ಅರಸನಾದ ಭಾನುಮಂತನ ಮಗಳಾದ ಕೌಸಲ್ಯೆಯನ್ನು ವರಿಸಿದೆ. ಅನೇಕ ವರ್ಷ ಮಕ್ಕಳಾಗದೆ ಇರುವ ಕಾರಣ, ಹೆಚ್ಚು ಮದುವೆಯಾಗುವುದು ರಾಜನಿಗೆ ಧರ್ಮವೇ ಆದ ಕಾರಣ, ಮಗದ ದೇಶದ ಶೂರಸೇನ ರಾಜನ ಮಗಳಾದ ಸುಮಿತ್ರೆಯನ್ನು ವಿವಾಹವಾದೆ. ಹಾಗೆಯೇ ಕೇಕಯದ ಅರಸ ಅಶ್ವಪತಿಯ ಮಗಳಾದ ಕೈಕೆಯನ್ನು ವರಿಸಿದೆ. ವಿವಾಹದ ಸಂದರ್ಭದಲ್ಲಿ ಅಶ್ವಪತಿಯ ಅಪೇಕ್ಷೆಯಂತೆ ಕೈಕೆಗೆ ಹುಟ್ಟುವ ಮಗುವಿಗೆ ರಾಜ್ಯಾಧಿಕಾರ ನೀಡುತ್ತೇನೆ, ಎಂಬ ಭಾಷೆಯಿತ್ತು ಪಾಣಿಗ್ರಹಣ ಮಾಡಿದ್ದೇನೆ. ಇವೆಲ್ಲ ಯಾವುದೋ ಮಹತ್ಕಾರ್ಯಕ್ಕೆ ನೆವನಗಳು, ಎಂದು ಊಹಿಸಿದ್ದೇನೆ. ಇಲ್ಲಿಯವರೆಗೂ ಅಪೇಕ್ಷಿತ ಸಂತಾನವಾಗಲಿಲ್ಲ, ಎಂಬ ಸಣ್ಣ ಕೊರತೆಯೊಂದನ್ನು ಬಿಟ್ಟರೆ ನಾವು ಸುಖಿಗಳು ಮತ್ತೂ - .........






Comments