top of page

ತಾಳಮದ್ದಳೆಯ ಕ್ರಮಗಳು - 4 (ಆಖ್ಯಾನ: ಪುತ್ರಕಾಮೇಷ್ಠಿ)

ree

ದೇವೇಂದ್ರ -ದೂತ

ಪಾಲಿಸೋ ಸುರಪ I ಲಾಲಿಸೋ ಕೆಡುಕ II ಖೂಳದೈತ್ಯರು ಗರ್ವತಾಳಿ ಬಂದಿರುವರು II ಇರುವ ಆಸೆಯಿಲ್ಲ ಧುರ ವಂತು ಸಲ್ಲ I ಪರಿಣಾಮವೇನೆಂದು ಸರಿಯಾಗಿ ಯೋಚಿಸು II

ದೂತ - ಸ್ವಾಮಿ ದೇವರಾಯ ಅಡ್ಡಬಿದ್ದೆ!!


ದೇವೇಂದ್ರ: ಏಳು ಏಳು... ಒಳ್ಳೆಯದೇ ಆಗಲಿ.


ದೂತ: ಒಳ್ಳೆಯದನ್ನೇ ಮಾಡಿ ಬಂದು, ದೂರು ಕೊಡುವುದಕ್ಕೆ ಬಂದೆ. ಕೇಳಬೇಕು ಕೆಡುಕಿನ ಕಥೆ.


ದೇವೇಂದ್ರ: ಓಹೋ ಏನಾಯಿತು, ಯಾರು ಕೆಡುಕು, ಯಾವ ಕೆಡುಕು ಮಾಡಿದ್ದಾರೆ?


ದೂತ: ಲಾಲಿಸಬೇಕು ಜೀಯಾ!! ಸ್ವರ್ಗಕ್ಕೆ ಬರುವವರೆಲ್ಲ ಒಳ್ಳೆಯವರು, ಪುಣ್ಯಾತ್ಮರೇ ಆಗಿರಬೇಕೆಂದೇನೂ ಇಲ್ಲ; ಎಂದು, ಇಂದು ತಿಳಿಯಿತು.


ದೇವೇಂದ್ರ: ಆಗಾಗ ರಾಕ್ಷಸರು ಬರುವುದಿದೆ .


ದೂತ: ಅದು ಯಾವಾಗಲೂ ಆಗುವ ಕಥೆ. ಈಗಲೂ ಹಾಗೇ ಆಗಿದೆ. ಒಡೆಯ! ಸ್ವರ್ಗದ ಸೀಮೆಯ ಅಂಚಿಗೆ ಕಾವಲು ಕಾಯುತ್ತಿದ್ದವರು ನಾವು. ಒಮ್ಮಿಂದೊಮ್ಮೆಗೆ ಕಡಿ, ಬಡಿ, ಹೊಡಿ, ಎಂಬ ಕೂಗು, ಗದ್ದಲ, ಕೇಳಿ ಬಂತು. ಗಡಿಬಿಡಿ ಇಂದ ನೋಡಿದರೆ, ಖೂಳ ರಕ್ಕಸರ ದಂಡು. ಅಬಬಬಬಾ!!!.. ಎಂತೆಂಥ ರಾಕ್ಷಸರು, ಭಯಂಕರ ದೇಹ, ಬೆಂಕಿ ಉಂಡೆಯಂತೆ ಉರಿಯುವ ಕಣ್ಣು, ಕೇಳಿದವರ ಎದೆ ಒಡೆದೇ ಹೋಗುವಂತಹ ಕೂಗು. ದೊರೆಯೇ, ಗರ್ವದಿಂದ ರಾಕ್ಷಸರು ಬಂದಿದ್ದಾರೆ. ಸ್ವರ್ಗವನ್ನು ನೀವು ಬಿಡಬೇಕಂತೆ. ಇಲ್ಲವಾದರೆ ಬಡಿದು ಓಡಿಸ್ತಾರಂತೆ; ಎಂದು ನಮ್ಮನ್ನು ಬಡಿದು ಅಟ್ಟಿದ್ದಾರೆ. ಕಾಪಾಡಬೇಕು, ಕಾಪಾಡಬೇಕು.


ದೇವೇಂದ್ರ: ಅರರೇ ಹೌದೇ, ಯಾರಂತೆ, ಎಲ್ಲಿಂದ ಬಂದವರಂತೆ, ಸ್ವರ್ಗದ ಲೋಭದಿಂದ ಬಂದಿದ್ದಾರೋ, ಅವರನ್ನು ಬಡಿದು ಹಾಕೋಣ.


ದೂತ: ಅವರಿಗೆ ಸ್ವರ್ಗದ ಆಸೆ ಇದೆಯೋ, ಇಲ್ಲವೋ, ಗೊತ್ತಿಲ್ಲ... ಆದರೆ ನಮಗಂತೂ ಇಲ್ಲಿರುವ ಆಸೆ, ಅವರ ಪೆಟ್ಟಿನಿಂದ ಓಡಿ ಹೋಯಿತು. ಅಬಬ..!! ಅವರ ಜೊತೆಗೆ ಯುದ್ಧವೋ??, ಸಾಧ್ಯವೇ ಇಲ್ಲ. ಅವರಿಗೇನು ವರ ಉಂಟೋ, ಎಷ್ಟು ಬಲ ಉಂಟು, ಯಾರಿಗೂ ಗೊತ್ತಿಲ್ಲ. ಅವ, ವೈಜಯಂತಿ ಎಂಬ ಪಟ್ಟಣದವನಂತೆ. ದಿಟ್ಟ ಶಂಬರಾಸುರ ಎಂಬುದು ಅವನ ಹೆಸರಂತೆ. ಏನು ಮಾಡುವುದು, ಎಲ್ಲಿಗೆ ಓಡುವುದು, ಗೊತ್ತಾಗುತ್ತಿಲ್ಲ... ನೀವೇ ಕಾಪಾಡಬೇಕು ಒಡೆಯ.


ದೇವೇಂದ್ರ: ಇವನ್ಯಾರೋ ದೂರ್ತ. ಕೆಟ್ಟ ಆಲೋಚನೆಯಿಂದ, ಅಡ್ಡದಾರಿ ಹಿಡಿದು ಬಂದಿದ್ದಾನೆ. ಯಾರು ಹೆದರಬೇಡಿ, ಅವರನ್ನು ಬಡಿದು ಓಡಿಸೋಣ. ಧೈರ್ಯ ತಾಳಿ. ಏಳಿ ಯುದ್ಧಭೂಮಿಗೆ ಸಾಗೋಣ.


ದೇವೇಂದ್ರ - ಶಂಬರಾಸುರ

ಸುರರಿಗಭಯವ ನೀಯುತ | ವಜ್ರವನು | ಧರಿಸಿ ಖತಿಯಿಂದೇಳುತ II ಕದನಕಿದಿರಾಗು ಬೇಗ | ಶೈಮಿನಿಯ ಸದನದೊಳಗಿಹುದು ಭೋಗ II

ದೇವೇಂದ್ರ: ಎಲಾ.. ಎಲಾ.. ರಕ್ಕಸನೇ! ಯಾರು ನೀನು, ಎಲ್ಲಿಂದ ಬಂದವ, ಎಂಬ ಪರಿಚಯವೇನು ಬೇಡ. ಉತ್ತಮನಾದರೆ ಪರಿಚಯ ಕೇಳುವುದಿದೆ. ಆದರೆ ಈ ರೀತಿ ಸೊಕ್ಕಿನಿಂದ, ಅಸೂಯಯಿಂದ; ಯಾವುದು ಸರಿ, ಯಾವುದು ತಪ್ಪು, ಎಂಬ ವಿವೇಕವಿಲ್ಲದೆ, ಮೈಮರೆವಿನಿಂದ ಬಂದವರಲ್ಲಿ, ಕೇಳಬೇಕಾದದ್ದೇನು ಇಲ್ಲ. ಈ ಸ್ವರ್ಗಭೂಮಿಗೆ ಬರಲು ಯೋಗ್ಯತೆ ಬೇಕು. ಪುಣ್ಯದ ಬಲ ಬೇಕು. ಅರಿವಿಲ್ಲದೆ ಬಂದೇಯೋ, ನಿನಗೆ ದಾರಿ ತಪ್ಪಿದೆ.


ಶಂಬರಾಸುರ: ಅರರೇ.. ಹಾಗಾದರೆ ಇದು ಸ್ವರ್ಗ ಲೋಕವಲ್ಲವೋ? ಓಹೋ, ಹೀಗಾಗಿರಬೇಕು. ನಿನ್ನ ಯಾವುದೋ ತಪ್ಪಿಗೆ, ನಿನಗೆ ನರಕದ ಶಿಕ್ಷೆಯಾಯಿತೋ ಹೇಗೆ!


ದೇವೇಂದ್ರ: ನರಕಕ್ಕೆ ಹೋಗಬೇಕಾದವ ನೀನು. ನಿನ್ನ ಪಾಪಕ್ಕೆ, ಆ ಶೈಮಿನಿಪುರದಲ್ಲಿ ಭೋಗವಿದೆ. ನನ್ನ ವಜ್ರಾಯುಧದ ಪೆಟ್ಟು ತಿಂದು, ಸತ್ತು ಶೈಮಿನಿ ಸದನಕ್ಕೆ ಹೋಗುವೆಯಂತೆ. ಯುದ್ಧಕ್ಕೆ ಬಾ ಮುಂದೆ.


ಶಂಬರಾಸುರ: ಅರರೇ... ಇಷ್ಟು ಧೈರ್ಯದಿಂದ ಯುದ್ಧಕ್ಕೆ ಕರೆಯುತ್ತಿಯೋ, ನಿನ್ನ ಬಗ್ಗೆ ತಿಳಿದ ಸಂಗತಿ.....


ವಂಚನೆಯೊಳೆಮ್ಮವರನು | ಮಡುಹುತೊಳ|ಸಂಚಿನಿಂದೀ ಸುಖವನು II ಮಿಂಚೆಸಿಹೆ ಸುರವರ್ಗದಿ I ಸೆಳೆದಿದನು | ಹಂಚುವೆನು ಕ್ಷಣಮಾತ್ರದಿ II

ಶಂಬರಾಸುರ: ಎಲ್ಲಾ ದೇವೇಂದ್ರ, ನಿನ್ನಲ್ಲಿ ಪೌರುಷದ ಮಾತನಾಡುವ ಧೈರ್ಯ ಉಂಟು. ಎಷ್ಟೊತ್ತು ಇರುತ್ತದೆ ನೋಡೋಣ. ಇದೇ ಧೈರ್ಯದಿಂದಲೇ, ಈ ಸ್ವರ್ಗ ಪಡೆದದ್ದೋ ಅಥವಾ ನೀನು ಅಡ್ಡದಾರಿಯಿಂದ ಪಡೆದದ್ದೊ!


ದೇವೇಂದ್ರ: ಶತಯಾಗದ ಫಲದಿಂದ ಲಭಿಸಿದ್ದು. ಈ ವಿಷಯ ತಿಳಿದಿಲ್ಲವೋ ನಿನಗೆ. ನೂರು ಅಶ್ವಮೇಧ ಮಾಡಿದವ ನಾನೊಬ್ಬನೇ. ಅದಕ್ಕೆ ಇಂದ್ರನಾದದ್ದು.


ಶಂಬರಾಸುರ: ವಿಷಯವು ಗೊತ್ತಿದೆ, ಕಥೆಯು ಗೊತ್ತಿದೆ. ಬೇರೆಯವರು ಯಜ್ಞ ಪೂರ್ಣಗೊಳಿಸಲು ನೀನೆಲ್ಲಿ ಬಿಟ್ಟಿದ್ದೀಯೇ, ಯಜ್ಞವೇನು, ಎಷ್ಟೋ ಜನರ ತಪಸ್ಸನ್ನೇ ಕೆಡಿಸಿದವ ನೀನು. ಒಂದು ಕಾಲದಲ್ಲಿ ಈ ಸ್ವರ್ಗವನ್ನು ನಿನ್ನ ಸೊಕ್ಕಿನ ಮಾತಿನಿಂದ ಕಳೆದುಕೊಂಡವ. ಸ್ವರ್ಗದ ಸಿರಿಯೆಲ್ಲ ಸಮುದ್ರದ ಪಾಲಾದಾಗ, ಅದನ್ನು ಪುನಃ ಪಡೆಯಲು, ನಮ್ಮವರೇ ನಿನಗೆ ಸಹಾಯ ಮಾಡಬೇಕಾಯಿತು. ದೇವ-ದನುಜರು ಸೇರಿ, ಸಮುದ್ರ ಮಥನ ಮಾಡಿದಾಗ, ಬಂದ ಸುವಸ್ತುಗಳನ್ನೆಲ್ಲ ನಮ್ಮವರಿಗೆ ವಂಚಿಸಿ, ನೀನೇ ಪಡೆದೆ. ನಮ್ಮವರ ಮುಗ್ಧತೆಗೆ ಮೋಸ ಮಾಡಿ, ಸ್ವರ್ಗ ಸಿಂಹಾಸನವೇರಿ ಮಿಂಚುತ್ತಿದ್ದೀಯೇ. ಎಲಾ ದೇವಧೂರ್ತನೆ, ಇದನ್ನೆಲ್ಲಾ ಸೆಳೆದು, ಯಾರಿಗೆ ಸಲ್ಲಿಸಬೇಕೋ ಅವರಿಗೆ ನೀಡ್ತೇನೆ. ಅದಕ್ಕಾಗಿಯೇ ವೈಜಯಂತಿ ನಗರದಿಂದ ಬಂದವ ಈ ಶಂಬರಾಸುರ.


ದೇವೇಂದ್ರ: ನಿನ್ನ ಮಾತು ಹೆಚ್ಚಾಯಿತು, ನೀನು ತಿಳಿದಿದ್ದು ಕಡಿಮೆಯಾಯಿತು. ನಿನ್ನಲ್ಲಿರುವುದು ಕೇವಲ ....

ಒಡಲುರಿಯು ನಿನಗೆ ಬರಿದೆ | ಯಾಗದಿಂ|ದೆಡೆದೊರೆತುದಿಲ್ಲ ಎನಗೆ|| ಕಡುಪಾಪ ಗೈದುನೀವು| ತತ್ವಲಕೆ|ಪಡೆಯುವಿರಿ ಸಾವುನೋವುII

ದೇವೇಂದ್ರ: ಶಂಬರಾಸುರ, ಪೂರ್ಣ ತಿಳಿದಾದರೂ ಮಾತನಾಡು. ಇಲ್ಲದೆ ಇದ್ರೆ, ಸುಮ್ಮನೆ ನಿಮ್ಮವರನ್ನು ವಂಚಿಸಿದ್ದಿಲ್ಲ. ಸಮುದ್ರಮಥನದಲ್ಲಿ ಹುಟ್ಟಿ ಬಂದ ಎಲ್ಲಾ ಸುವಸ್ತು ಆಯ್ಕೆಗೂ, ಮೊದಲ ಆದ್ಯತೆ ನಿಮ್ಮವರಿಗೆ ಕೊಟ್ಟಿದ್ದೆವು. ಆದರೆ, ನಿಮ್ಮವರೇ ಆಲೋಚಿಸಿ, ನಿರ್ಧರಿಸಿ, ಈ ಸುವಸ್ತುಗಳನ್ನು ಇಲ್ಲೇ ಬಿಟ್ಟಿದ್ದಾರೆ. ಸಮುದ್ರ ಮಥನ ಪ್ರಸಂಗ ಸರಿಯಾಗಿ ಓದಿಲ್ಲ ನೀನು. ಸ್ವರ್ಗದ ಭೋಗ ನಿನಗಿಲ್ಲ;ಎಂಬ ಹೊಟ್ಟೆ ಉರಿ ನಿನಗೆ. ಎಲಾ ದುರುಳನೇ, ಕೇವಲ ಶತಯಾಗದಿಂದ ಮಾತ್ರವೇ ಇಂದ್ರ ಪದವಿ ದೊರೆತದ್ದಲ್ಲ. ತ್ರಿಮೂರ್ತಿಗಳ ಅನುಗ್ರಹವೂ ಬೇಕು, ಬ್ರಹ್ಮರ್ಷಿಗಳ-ಋಷಿಗಳ ಸಮ್ಮತಿಯು ಬೇಕು. ಮತ್ತೆ ಸದಾ ಕಾಲ ನಮ್ಮಲ್ಲಿ ಧರ್ಮ ನಿಷ್ಠೆ ಜಾಗೃತ ಆಗಿರಬೇಕು. ಇದೆಲ್ಲ ತಿಳಿಯದೆ, ನನಗೂ ಪಾಲುಂಟು, ಎಂದು ಏರಿ ಬರುತ್ತೀರಿ;ಪೆಟ್ಟು ತಿಂದು ನೋವಿನಿಂದ ಸಾಯುತ್ತೀರಿ. ಉತ್ತಮರಾಗಿ ಬದುಕುವ ಯೋಗ್ಯತೆಯೂ ಇಲ್ಲ, ಯೋಚನೆಯೂ ನಿಮಗಿಲ್ಲ. ಬಡಿದು ಬುದ್ಧಿ ಕಲಿಸ್ತೇನೆ ಈಗ.


ಶಂಬರಾಸುರ: ನೀನೆಷ್ಟು ಯೋಗ್ಯ,ಎಂದು ತಿಳಿದಿದ್ದೇನೆ.

ಅರಿತಿಹೆನು ನಿನ್ನ ಘನತೆ|ದಿತಿಜ ಕುಲ|ಮೆರೆಯೆ ನಿನಗಹದು ಕೊರತೆI ಕರದಿ ಧರಿಸಿಹ ಕುಲಿಶ ವ| ಬೀಳಿಸುವೆ ಪರಿಕಿಸೈ ರಣರಭಸವ II

ಶಂಬರಾಸುರ: ಮೋಸಗಾರರು ಬುದ್ದಿವಂತರಾಗಿರುಗತ್ತಾರೆ ಎಂದು ನಿನ್ನನ್ನು ನೋಡಿಯೇ ಹೇಳಿರಬೇಕು. ಲೋಕ ಕ್ಷೇಮವನ್ನೇ ಸಾಧಿಸುವ ತಪಸ್ಸು ಮಾಡುವ ಬೃಗು ಮುನಿಯ ಹೆಂಡತಿ ಖ್ಯಾತಿಯನ್ನು ಕೊಂದವರು ಯಾರು? ನೀನೇ ತಾನೆ. ನಿನ್ನ ಪಟ್ಟ ಉಳಿಸಿಕೊಳ್ಳುವ ಆಸೆಯಿಂದ, ಹೆಂಗೊಲೆಯಂತ ಕೊಳಕು ಕಾರ್ಯ ಮಾಡಿದವ ನೀನು. ನನಗೆ ಘನತೆಯ ಪಾಠಮಾಡುತ್ತಿದ್ದೀಯೆ. ಒಡಲುರಿ ಎಲ್ಲರಿಗೂ ಇರುತ್ತದೆ. ಆದರೆ, ನಿನಗೆ ಎಲ್ಲರಿಗಿಂತ ಹೆಚ್ಚಿಗೆಯೇ ಇದೆ. ಎಲಾ ಧೂರ್ತ ಇಂದ್ರನೇ!, ನಮ್ಮವನಾದ ಬಲಿರಾಯನಿಗೆ, ನೀನೆಷ್ಟು ಕಷ್ಟ ಕೊಟ್ಟೆ. ರಾಕ್ಷಸ ಕುಲ ಅಭಿವೃದ್ಧಿಯಾದರೆ, ನಿನಗೆ ಮತ್ಸರ ಬೆಳೆಯುತ್ತದೆ. ಎಲಾ ವಂಚಕ! ಬರಿದೆ ಮಾತನಾಡುವುದಕ್ಕೆ ಬಂದಿದ್ದಲ್ಲ. ಇದೋ ನೋಡು ನನ್ನಲ್ಲೂ ಕುಲಿಶವಿದೆ. ಇದರಿಂದ ಬಡಿಯುತ್ತೇನೆ. ಪೆಟ್ಟು ತಿಂದು ಓಡುತ್ತೀಯೋ, ಹಾಗೆಯೇ ಓಡುತ್ತಿಯೋ, ನಿನಗೆ ಬಿಟ್ಟದ್ದು. ನನಗೆ ಸ್ವರ್ಗದ ಅಧಿಕಾರ ಬಿಡು - ಓಡು.


ದೇವೇಂದ್ರ: ಮಾತಿಗೆ ಹೆದರಿದರೆ ನಾನಿಲ್ಲಿ ಇರುತ್ತಿರಲಿಲ್ಲ. ನಿನಗಿಂತ ಚೆನ್ನಾಗಿ ಮಾತನಾಡುವವರನ್ನೂ ನೋಡಿದ್ದೇನೆ. ಕೇಳಿದವರಿಗೆಲ್ಲ ಕೊಡುವುದಕ್ಕಾಗಿ ಇದ್ದಿದ್ದಲ್ಲ. ಯಾರು ಓಡ್ತಾರೆ ನೋಡೋಣ, ಬಾ ಯುದ್ಧಕ್ಕೆ.

Comments


bottom of page