top of page

ತಾಳಮದ್ದಳೆಯ ಕ್ರಮಗಳು - ಪ್ರಾಥಮಿಕ ಪರಿಚಯ


🎭 ತಾಳಮದ್ದಳೆಯ ಕ್ರಮ – ಹಂತಗಳು:

ತಾಳಮದ್ದಳೆ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಯ್ತು. ಮೊದಲೆಲ್ಲ ಒಬ್ಬ ವ್ಯಕ್ತಿ - ತಾಳಮದ್ದಲೆಯನ್ನು ಆಯೋಜಿಸಿದವ - ಯಜಮಾನ. ಯಜಮಾನನ ಮನೆಯ ದೇವರಿಗೆ ಸ್ತುತಿ ಪದ್ಯಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ರಂಗ ಪ್ರವೇಶ ಮಾಡುವುದಾಗಿತ್ತು. ಆದರೆ ಈಗ ಬಹುತೇಕ ಕಾರ್ಯಕ್ರಮಗಳು ಹೊರಾಂಗಣ, ಅಂದರೆ ಯಾವುದಾದರೂ ಸಮುದಾಯ ಭವನ - ಕಲ್ಯಾಣ ಮಂಟಪದಂತಹ ಸ್ಥಳದಲ್ಲಿ ನಡೆಯುತ್ತದೆ. ಹಾಗಾಗಿ ನೇರ ರಂಗದಲ್ಲಿಯೇ ಗಣಪತಿ ಪೂಜೆ ಮಾಡಿ, ಕಾರ್ಯಕ್ರಮ ಪ್ರಾರಂಭಿಸುತ್ತಾರೆ.
ree

ಎಲ್ಲೇ ಆದರೂ ತಾಳಮದ್ದಳೆ ಅಥವಾ ಆಟ, ಆರಾಧನೆಯ ಕಲೆ. ಹಾಗಾಗಿ ಆರಾಧನೆಯ ಅಂಶವಾದ ಆಸಕ್ತಿ, ಭಕ್ತಿ, ಪಾವಿತ್ರ್ಯತೆ, ಅರಿವು, ಅದರ ಅಂಶಗಳಾಗಿವೆ. ಅದು, ಇವತ್ತಿಗೂ ಹಾಗೇ ಇದೆ. ಓದುಗರಿಗೆಲ್ಲ ತಾಳಮದ್ದಲೆ ಪ್ರದರ್ಶನ ಕಾರ್ಯಕ್ರಮದ ಸಾಮಾನ್ಯ ಪರಿಚಯವಂತೂ ಇದ್ದೇ ಇರುತ್ತದೆ. ಈಗ ತಾಳಮದ್ದಳೆಯಲ್ಲಿ ಒಂದು ಪುರಾಣ ಕಥಾನಕದ ಪ್ರದರ್ಶನ ಹೇಗೆ ಎಂದು ಅವಲೋಕಿಸೋಣ.


ಆಟ ಮತ್ತು ತಾಳಮದ್ದಳೆಯ ಆಖ್ಯಾನವನ್ನು ಪದ್ಯಗಳ ರೀತಿಯಲ್ಲಿ ಬರೆದ ಅನೇಕ ಕವಿಗಳಿದ್ದಾರೆ. ಅವರಲ್ಲಿ ಪಾರ್ತಿಸುಬ್ಬ ಎಂಬವರು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ. ಅವರಿಂದ ರಚಿತವಾದ ಎಲ್ಲಾ ಪ್ರಸಂಗ ಸಾಹಿತ್ಯಗಳೂ ಅತ್ಯುತ್ತಮ ಎಂದು ಒಪ್ಪಿದ್ದಾರೆ. ಈಗ ನಾವು ಅವಲೋಕಿಸುವುದಕ್ಕೆ, ನಮಗೆ ಗುರು ಸ್ಥಾನದಲ್ಲಿದ್ದವರಾದ ಶ್ರೀ ಮಂಜುನಾಥ ಭಟ್ಟ ಹೊಸತೋಟ ಭಾಗವತರು, ಇವರಿಂದ ರಚಿತವಾದ ಪ್ರಸಂಗಗಳನ್ನು ಆಧರಿಸೋಣ.



ತಾಳಮದ್ದಳೆಯ ಪ್ರದರ್ಶನದ ಪ್ರಾರಂಭದಲ್ಲಿ ಪ್ರಥಮವಾಗಿ ಗುರು, ಗಣಪತಿಯ ಸ್ತುತಿಪದ ಹಾಡಲಾಗುತ್ತದೆ. ನಂತರ ನಾಂದಿ ಪದ ಹೇಳಿ, ಅಂದಿನ ಆಖ್ಯಾನವನ್ನು ಘೋಷಿಸಲಾಗುತ್ತದೆ. ಇಂದಿನ ಲೇಖನದಲ್ಲಿ ಉದಾಹರಣೆಗೆ ಆಯ್ಕೆ ಮಾಡಿ ಕೊಂಡಿದ್ದು ಮಂಜುನಾಥ ಭಾಗವತರ 'ಶ್ರೀರಾಮ ಮಹಿಮೆ' ಯಕ್ಷಗಾನ ರಾಮಾಯಣ ಕೃತಿಯಲ್ಲಿನ 'ಪುತ್ರಕಾಮೇಷ್ಠಿ' ಪ್ರಸಂಗದ ಭಾಗ. ಇಲ್ಲಿ ನಾಂದಿ ಪದವಾಗಿ ವಾಲ್ಮೀಕಿ ಸ್ತುತಿಯನ್ನು ಭಾಮಿನಿ ರೀತಿಯಲ್ಲಿ ರಚಿಸಿದ್ದಾರೆ.

ರಾಮಚರಿತೆಯ ಬರೆದು ಮೋದದಿ | ರಾಮನಣು ಗರಿಗದನು ಬೋಧಿಸಿ l ರಾಮನಿಗೆ ಕೇಳಿಸಿದ ರಾಮಾಯಣವ ವಾಲ್ಮೀಕ II ರಾಮಣೀಯಕ ವೃತ್ತ ರಚನಾ|ರಾಮ ನಾಮೋದ್ಧೃತ ವಿಲಾಸ ವಿ|ರಾಮ ಯೋಗಿಗೆ ಮಣಿದು ಪೇಳುವೆ ರಾಮ ಮಹಿಮೆಯನು||

🎭ಪೀಠಿಕೆ ನಿರ್ವಹಣೆಯ ನೀತಿ


ನಂತರ ರಂಗತಂತ್ರದ ಕ್ರಮದಂತೆ - ಒಂದು ಕಥೆಯನ್ನು ಕಲಾ ಮಾಧ್ಯಮದ ವಿಧಿಯಂತೆ ಪ್ರದರ್ಶಿಸುವ ನಿಯಮದಂತೆ ಒಡ್ಡೋಲಗದ ಕ್ರಮ. ಸಾಮಾನ್ಯವಾಗಿ ದೇವೇಂದ್ರನ ಓಲಗ. ಆ ಕಥೆಗೆ ಸಂಬಂಧ ಪಟ್ಟು ಕಥೆಯ ಮೊದಲ ಪಾತ್ರ ಪ್ರಾರಂಭ. ಈ ಕಥೆಯಲ್ಲಿ ಇಂದ್ರನ ಓಲಗ. ಸಾಮಾನ್ಯವಾಗಿ ಎಲ್ಲ ಪಾತ್ರಧಾರಿಗಳು, ತಮ್ಮ ಪಾತ್ರ ನಿರ್ವಹಣೆಗೆ ಪೀಠಿಕಾ ಸಮಯವನ್ನು ಬಯಸುತ್ತಾರೆ. ಕಾರಣ, ಪಾತ್ರಧಾರಿಗೆ ರಂಗ ಪ್ರವೇಶಿಸಿ, ವಯಕ್ತಿಕವಾದ ಒತ್ತಡ, ಆತಂಕ, ಭಯ ದೂರಾಗಿಸಿಕೊಂಡು ಪ್ರೇಕ್ಷಕ ವೃಂದವನ್ನು ಗುರುತಿಸಿಕೊಂಡು, ತನ್ನ ಪಾತ್ರವನ್ನು ಮಾತಿನ ಮುಖಾಂತರ ಚಿತ್ರಿಸುವುದಕ್ಕಾಗಿ, ಪಾತ್ರದ ಗುಣಧರ್ಮಗಳನ್ನು ಪ್ರವೇಶಿಸುವುದಕ್ಕಾಗಿ 'ಪೀಠಿಕೆ' ಸಮಯವನ್ನು ಅಪೇಕ್ಷಿಸುತ್ತಾರೆ. ಪೂರ್ಣ ಪ್ರದರ್ಶನದ ಸಮಯ, ಮಿತಿಯನ್ನು ಆಲೋಚಿಸಿಕೊಂಡು ಪೀಠಿಕೆಯ ಯುಕ್ತಾಯುಕ್ತತೆ ನಿರ್ಣಯಿಸಿಕೊಳ್ಳಬೇಕಾದದ್ದು ಪಾತ್ರಧಾರಿಯ ಹೊಣೆಗಾರಿಕೆ.


ಈ ಕಥೆಯಲ್ಲಿ ಇಂದ್ರ, ತನ್ನವರೊಡಗೂಡಿ ಓಲಗಿಸುವಲ್ಲಿಂದ ಪ್ರಾರಂಭ.


🎭 ಇಂದ್ರನ ಒಡ್ಡೋಲಗ


ಸುಮನಸಾಧಿಪ ಇಂದ್ರ | ಓಲಗವಿತ್ತ | ಅಮಿತ ಸಂತೋಷದಿಂದ II

ಅಮರನಾರಿಯರಾಗ ಕ್ರಮದಿ ನರ್ತಿಸುತಿರೆ | ರಮಣೀಯ ರೂಪ ಸಂಭ್ರಮದ ಸಂಮೋದದಿ||


ಇಂದ್ರನ ಅರ್ಥ ವಿವರಣೆ ಪ್ರಾರಂಭಿಸುವಾಗ ಇಂದ್ರ ಪದವಿ ಹೇಗೆ ಬಂತು, ಸ್ವರ್ಗದಲ್ಲಿ ಸುಧರ್ಮ ಸಭೆಯ ಚಿತ್ರಣ, ದೇವೇಂದ್ರನ ಅಧಿಕಾರ ವ್ಯಾಪ್ತಿ ಹಾಗೂ ರಕ್ಕಸರು ಸ್ವರ್ಗದ ಮೇಲೆ ದಾಳಿ ಮಾಡುವ ಚಿಂತೆ, ಇವು, ದೇವೇಂದ್ರನ ಪಾತ್ರವಿರುವ ಪ್ರಸಂಗದಲ್ಲಿ ಬರುವ ವಿಚಾರ. ತಾಳಮದ್ದಳೆಯಲ್ಲಿ ಅರ್ಥಗಾರಿಕೆಯಾಗಲೀ, ಆಟದಲ್ಲಿ ಅರ್ಥಗಾರಿಕೆಯಾಗಲೀ, ಕಲಾವಿದರಿಗೆ ಅತ್ಯಂತ ಪ್ರಭಾವಿತ ಅಧ್ಯಯನ ಅವಶ್ಯಕ.


🎭 ಪ್ರಾರ್ಥಮಿಕ ಪರಿಚಯಕ್ಕಾಗಿ ದೇವೇಂದ್ರನ ಪೀಠಿಕೆ


ದೇವೇಂದ್ರ: (ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ್ಯ) ಅಷ್ಟದಿಕ್ಪಾಲಕರೇ, ಅಷ್ಟ ವಸುಗಳೇ, ಸ್ವರ್ಗಲೋಕದ - ಈ ಸುಧರ್ಮ ಸಭೆಯ ಪವಿತ್ರ ಮಹಿಮೆಯನ್ನು ಹೆಚ್ಚಿಸಿದ ಋಷಿ ಪುಂಗವರೇ, ಸಿದ್ದರೇ, ಸಾಧ್ಯರೇ, ರಾಜರ್ಷಿಗಳೇ, ಮಹರ್ಷಿಗಳೇ ನಿಮ್ಮೆಲ್ಲರ ಪುಣ್ಯದ ವಿಶೇಷ ಬಲದಿಂದ ಈ ಸ್ವರ್ಗ ಲೋಕ ಸ್ಥಿರವಾಗಿದೆ. ಹಾಗೆಯೇ ನೀವು ಸ್ವರ್ಗದ ಸುಖದ ಅನುಭವಕ್ಕೆ, ಅರ್ಹರಾಗಿದ್ದೀರಿ. ಅಂತೆಯೇ ಇಲ್ಲಿಯವರೆಗೆ ಸಿದ್ಧಾಂತದ ನಿಯಮದಂತೆ ಯಾರು ಜೀವನದಲ್ಲಿ ಸತ್ಕರ್ಮ, ಸಾಧನೆಯನ್ನು ಗಳಿಸಿದ್ದಾರೋ, ಅವರಿಗೆ ಸ್ವರ್ಗ ಪ್ರಾಪ್ತಿ. ಅಧರ್ಮಿಗಳಿಗೆ - ದುಷ್ಕರ್ಮನಿರತರಿಗೆ ನರಕ ಶಿಕ್ಷೆ ಪ್ರಾಪ್ತಿ. ಭೂಲೋಕದ ಜೀವನ ಕ್ರಮವನ್ನೇ ಆಧರಿಸಿ, ಸ್ವರ್ಗ ಮತ್ತು ನರಕ ಎಂಬ ಎರಡು ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. 'ಇಂದ್ರ' ಎಂಬುದು ಪದವಿ ಸೂಚಕ ಪದ, ಇದು ನನ್ನ ಹೆಸರಲ್ಲ. ಪುರಂಧರನಾಮಕನಾದ ನಾನು ಇಂದ್ರ ಪದವಿಯಲ್ಲಿದ್ದೇನೆ. ಸ್ವರ್ಗದ, ಭೂಲೋಕದ, ಪಾತಾಳಲೋಕದ ಧರ್ಮಾಧಿಕಾರ ನನ್ನದು. ಭೂಮಿಯ ಪ್ರಕೃತಿಗೆ ಪೂರಕವಾಗಿ ಮೇಘಾಧಿಕಾರವನ್ನು ಹೊಂದಿದ್ದೇನೆ. ವಜ್ರ ಆಯುಧವಾಗಿದೆ, ಐರಾವತ ವಾಹನವಾಗಿದೆ.


ಅಗ್ನಿ: ಅದೇ ರೀತಿ ಪ್ರತಿಯೊಬ್ಬ ದಿಕ್ಪಾಲಕರಿಗೂ ಸ್ಥಳ - ಅಧಿಕಾರವಿದೆ. ನನಗೆ ತೇಜೋವತಿ ನಗರ, ಯಜ್ಞದಲ್ಲಿ ಆಹುತಿ ಸ್ವೀಕಾರ, ಇಷ್ಟಪ್ರಧಾನ - ಮೇಷ ವಾಹನ, ಶಕ್ತಿ ಆಯುಧ.


ಇಂದ್ರ: ಭೂಲೋಕದಲ್ಲಿ ಧಾರ್ಮಿಕ ಜೀವನದಲ್ಲಿ, ಸಾರ್ಥಕತೆ ಪಡೆದಂತೆ, ಇಲ್ಲಿಯೂ ಧರ್ಮ ಬದ್ಧವಾದ ನಡೆಯೇ ನಮ್ಮ ದಾಗಿರಬೇಕು, ತಪ್ಪಿದರೆ ನಮಗೂ ಶಿಕ್ಷೆಯಿದೆ.


ಯಮ: ನಮ್ಮ ತಪ್ಪಿನ ಶಿಕ್ಷೆಗಾಗಿ ನರಕಕ್ಕೆ ಹೋಗುವುದಿಲ್ಲ. ಬದಲಾಗಿ ಭೂಮಿಗೆ ಸಾಗುತ್ತೇವೆ. ಜೀವಿಗಳ ಜೀವಿತಾವಧಿಯನ್ನು ಲೆಕ್ಕಿಸುವುದು, ಆಯುಷ್ಯ ಮುಗಿದ ನಂತರ ಅವನ ಜೀವ - ದೇಹವನ್ನು ಬೇರೆ ಬೇರೆಗೊಳಿಸಿ, ಜೀವದ ಕರ್ಮ, ಫಲವನ್ನು ನಿಶ್ಚಯಿಸುವುದು. ಮೃತ್ಯುವಧಿಕಾರ ನನ್ನದು. ಮಹಿಷವಾಹನ - ದಂಡಾಸ್ತ್ರ.


ಇಂದ್ರ: ಇಂತಹ ವೈಭವವನ್ನು, ಅಧಿಕಾರವನ್ನು ತ್ರಿಮೂರ್ತಿಗಳ ನಿರ್ದೇಶನದಂತೆ ಪಡೆಯಲು, ಅವರೇ ತಿಳಿಸಿದ ರೀತಿಯಲ್ಲಿ ಅರ್ಹತೆ ಪಡೆದಿರಬೇಕು. ಶತಾಶ್ವಮೇಧವನ್ನು ನಿರ್ವಿಘ್ನವಾಗಿ ಮಾಡಿದವನಿಗೆ ಒಂದು ಮಹಾಯುಗದ ಇಂದ್ರಾಧಿಕಾರ ಪ್ರಾಪ್ತಿ - ಅದರಂತೆ ನಾವೀಗ ಸ್ವರ್ಗದಧಿಕಾರ, ಸುಖ ಭೋಗದಲ್ಲಿದ್ದೇವೆ. ಬಹುಕಾಲದಿಂದ ಯಾವುದೇ ವೈರಿಗಳ ದಾಳಿಯ ಆತಂಕ ಇಲ್ಲದೇ ಇರುವುದರಿಂದ ಅತ್ಯಂತ ಸಂತೋಷದಲ್ಲಿದ್ದೇವೆ. ಸಭಾವೈಭವ, ಅಪ್ಸರೆಯರ ನಾಟ್ಯದಿಂದಲೂ, ಗಂಧರ್ವರ ಗಾನದಿಂದಲೂ ಮೆರೆಯುತ್ತಿದೆ. ಗಾನ-ನಾದ-ನಾಟ್ಯಗಳ ಆಮೋದದಲ್ಲಿ ನಮ್ಮ ಎಚ್ಚರಿಕೆಯನ್ನು ಮರೆಯಬಾರದು. ಸದಾಕಾಲ ಜಾಗೃತರಾಗೇ ಇರುವುದಕ್ಕೆ ಕಾರಣವಿದೆ.

ಅದೇನೆಂದರೇ:- (ಮುಂದಿನ ಭಾಗದಲ್ಲಿ ಅವಲೋಕಿಸೋಣ....)


Comments

Rated 0 out of 5 stars.
No ratings yet

Add a rating
bottom of page