top of page

ತಾಳಮದ್ದಲೆ: ನಮ್ಮ ಜೀವನ


ಮನುಷ್ಯನು ಸಮಾಜ ಮತ್ತು ಸಂಘಜೀವಿ ಆದಲ್ಲಿಂದ, ಕಾಲಕಾಲಕ್ಕೆ ಬದಲಾಗುವ, ಸಮಾಜದ ಮನೋಸ್ಥಿತಿ ಸ್ಥಿರವಾಗಿರುವುದಕ್ಕಾಗಿ, ಶಾಶ್ವತ ಮೌಲ್ಯ ಸಿದ್ಧಾಂತಗಳನ್ನು, ಜೀವನಾನುಭವದ ಹಿರಿಯರು, ವಿದ್ವಾಂಸರು, ಋಷಿಗಳು ರೂಪಿಸಿದ್ದಾರೆ. ಮನುಷ್ಯನು ಸದಾಕಾಲ ತನ್ನನ್ನು ತಾನು, ಉನ್ನತೀಕರಿಸಿಕೊಳ್ಳುವುದಕ್ಕೆ, ಗುಣಧರ್ಮಗಳನ್ನು ರೂಪಿಸಿಕೊಳ್ಳುವುದಕ್ಕೆ, ಅನೇಕ ಪ್ರಕಾರದ ವಿದ್ಯೆ, ಕಲೆ, ಕೌಶಲ ಮುಂತಾದ ಮಾಧ್ಯಮಗಳನ್ನು ರೂಪಿಸಿಕೊಳ್ಳಲಾಯಿತು.

ಕಲಾಪ್ರಕಾರಗಳಲ್ಲಿ ವರ್ತಮಾನ ಜೀವನವನ್ನು ಹೊರತುಪಡಿಸಿ, ಪೂರ್ವೇತಿಹಾಸದ ಘಟನೆಗಳನ್ನು, ವ್ಯಕ್ತಿತ್ವವನ್ನು, ವಿಶೇಷ ಚರಿತ್ರೆಯನ್ನು, ಅನುಕರಿಸುವ ಮೂಲಕ, ಉನ್ನತೀಕರಣದ ಗುಣ ಧರ್ಮವನ್ನು ಕಾಣಬಹುದು, ಎಂದು ಅನುಭವ ಸಿದ್ಧಾಂತವನ್ನು ಹೇಳಿದ್ದಾರೆ. ಅಂತಹ ಕಲಾಪ್ರಕಾರದಲ್ಲಿ ಯಕ್ಷಗಾನ, ಯಕ್ಷಗಾನ ತಾಳಮದ್ದಳೆ ವಿಭಾಗಗಳು ಅತ್ಯಂತ ಶ್ರೇಷ್ಠವಾಗಿದೆ.

ಯಕ್ಷಗಾನ ತಾಳಮದ್ದಲೆ

ಪುರಾಣದ ಕಥೆಗಳನ್ನು ಯಕ್ಷಗಾನದಲ್ಲಿ ಸೂಚಿತ ಯೋಜಿತ ರೀತಿಯಲ್ಲಿ ವೇಷ, ಬಣ್ಣ, ನೃತ್ಯ, ಮಾತಿನ ಮುಖಾಂತರ ಪ್ರದರ್ಶನಗೊಳಿಸುವುದು ಯಕ್ಷಗಾನ ಆಟ. ಬಣ್ಣ, ವೇಷ, ನೃತ್ಯಗಳಿಲ್ಲದೆ ಕೇವಲ ಅಭಿನಯ, ಮಾತಿನ ಮೂಲಕ ಪೌರಾಣಿಕ ಕಥೆಯನ್ನು ಪ್ರದರ್ಶನ ಗೊಳಿಸುವುದು ಯಕ್ಷಗಾನ ತಾಳಮದ್ದಲೆ.


ಅನೇಕ ವರ್ಷಗಳ ಹಿಂದೆ, ತಾಳಮದ್ದಲೆ ಕೇವಲ ಯಕ್ಷಗಾನ ಆಟಕ್ಕೆ ಪೂರ್ವಸಿದ್ಧತೆಗಾಗಿಯೇ ಉಳಿದಿತ್ತು. ಈಗ ತನ್ನದೇ ಸ್ವಂತಿಕೆಯೊಂದಿಗೆ ಸ್ವರೂಪ ಪಡೆದು ಸ್ವತಂತ್ರ ಕಲಾಪ್ರಕಾರವಾಗಿ ಬೆಳೆದು ಬಂದಿದೆ.


ತಾಳಮದ್ದಲೆ ಉತ್ತಮ ಸಂವಹನ ಮಾಧ್ಯಮ. ತಾಳ ಮದ್ದಲೆಯನ್ನು ನಡೆಸುವ ಪ್ರತಿ ಕಲಾವಿದನು ತಿಳಿದಿರಬೇಕಾದ ಸಂಗತಿ ಎಂದರೆ: ತಾವು ಪ್ರದರ್ಶನಗೊಳಿಸುತ್ತಿರುವ ಕಥೆಯ ತಿಳುವಳಿಕೆ, ಅದರಲ್ಲಿ ಬರುವ ಪಾತ್ರಗಳ ಸ್ವಭಾವ, ಗುಣ, ಧರ್ಮ, ಅವುಗಳನ್ನು ಪುಷ್ಟೀಕರಿಸುವ ಭಾವಪೂರ್ಣತೆ, ಸ್ವರದ ಏರಿಳಿತ, ಸಭಾ ಪ್ರಜ್ಞೆ, ಚಾತುರ್ಯ. ಇವುಗಳನ್ನು ಅಭ್ಯಾಸದಿಂದ ಸಿದ್ಧಿಗೊಳಿಸಿದಾಗ, ಕೇವಲ ಕಲಾಪ್ರಕಾರಕ್ಕಷ್ಟೇ ಅಲ್ಲದೇ, ವ್ಯಕ್ತಿಯ ನಿಜ ಜೀವನದಲ್ಲೂ ಪರಿಣಾಮಕಾರಿಯಾಗಿಯೇ ಇರುತ್ತದೆ. ಉತ್ತಮವಾದ ಮಾತು ಹೇಗಿರಬೇಕು ~ ಇನ್ನೊಬ್ಬ ವ್ಯಕ್ತಿಯ ಮಾತನ್ನು, ಭಾವವನ್ನು, ಸಂಕೃತಿಯನ್ನು ತಿಳಿದುಕೊಳ್ಳುವುದು ಹೇಗೆ ಮತ್ತು ಅದಕ್ಕೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ತಿಳಿಯಬಹುದು.


ತಾಳಮದ್ದಳೆ ಪ್ರದರ್ಶನವನ್ನು, ಈ ರೀತಿ ಆಂಶಿಕ ವಿಂಗಡಣೆ ಮಾಡಬಹುದು.

ಸಮಯ ಮಿತಿ ಮತ್ತು ಪೂರ್ಣ ರಾತ್ರಿ ಎಂಬ ಎರಡು ಸಮಯದ ಕಲ್ಪನೆಗೆ ಹೊಂದಿಸಿ,

  1. ಕಲಾವಿದರು, ಪ್ರಸಂಗ, ಪೂರ್ವ ಸಿದ್ಧತೆ, ಕಥಾ ಸಂದರ್ಭ ಆಯ್ಕೆ.

  2. ಸ್ಥಳದ ಆಯ್ಕೆ, ರಂಗ ನಿರ್ಮಾಣ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ.

  3. ಹಿಮ್ಮೇಳ: ಭಾಗವತರು, ಮದ್ದಳೆ ವಾದಕರು, ಚಂಡೆ ವಾದಕರು.

  4. ಮುಮ್ಮೇಳದಲ್ಲಿ - ಕಥಾ ಪಾತ್ರಗಳ ನಿರ್ವಹಣೆಯ ಕಲಾವಿದರು.

  5. ಪ್ರದರ್ಶನದ ಸಮಯದ ನಿರ್ಧಾರ.

  6. ಪ್ರೇಕ್ಷಕರ ವೃಂದ.

  7. ಕಾಲಕ್ಕೆ ಸರಿಯಾದ ಆತಿಥ್ಯ, ಆದರೋಪಚಾರ.

  8. ಕಲಾವಿದರಿಗೆ ಗೌರವ ಸಮ್ಮಾನ.


ಹೀಗೆ ಒಂದು ಪ್ರದರ್ಶನಕ್ಕೆ ಬೇಕಾದ ಸಿದ್ಧತೆಯೊಂದಿಗೆ ತಾಳಮದ್ದಳೆ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತದೆ.


ಮುಂದಿನ ಭಾಗದಲ್ಲಿ, ಉದಾಹರಣೆ ಸಹಿತ ಪೌರಾಣಿಕ ಕಥೆಯನ್ನು, ತಾಳಮದ್ದಲೆಯ ಮಾಧ್ಯಮದಲ್ಲಿ ಅವಲೋಕಿಸೋಣ.

Comments


bottom of page