top of page

ತಾಳಮದ್ದಳೆಯ ಕ್ರಮಗಳು - 7 (ಆಖ್ಯಾನ: ಪುತ್ರಕಾಮೇಷ್ಠಿ)

ree
ನಿರತ ಸುಕ್ಷೇಮಿಗಳು ಪ್ರಜೆಗಳುIದುರಿತವನು ಕಂಡರಿಯರು| ಕೊರತೆ ನಮಗಿಲ್ಲೆನುತ ಭೂಪತಿI ಹರುಷದಿಂದಿರುತ್ತಿದ್ದನುII

ದಶರಥ: ಸರ್ವ ಜನರ ಕ್ಷೇಮವನ್ನು ಸಾಧಿಸುವಲ್ಲಿ ರಾಜನೋ,ಆಡಳಿತ ಮಾತ್ರ ಪ್ರಯತ್ನ ಮಾಡಿದರೆ ಸಾಲದು. ಆ ಪ್ರಯತ್ನಕ್ಕೆ ಬೆಂಬಲವಾಗಿ ಪ್ರಜೆಗಳು ಸಹಕಾರಿ ಆಗಬೇಕು. ನನ್ನ ಭಾಗ್ಯದ ಫಲವೆಂದರೆ ಸಜ್ಜನರು, ಧಾರ್ಮಿಕರು, ಪುಣ್ಯಭಾಜನರು,ಆದ ಪ್ರಜೆಗಳು ಅಯೋಧ್ಯೆಯಲ್ಲಿ ವಾಸ ಮಾಡುತ್ತಿರುವರು. ವರ್ಣಾಶ್ರಮಕ್ಕೆ ಯುಕ್ತವಾದ ಕಾರ್ಯ ಮಾಡುವುದು,ಧಾರ್ಮಿಕ ದೃಷ್ಟಿಯಿಂದ ಕಾರ್ಯ ಮಾಡುವುದು, ನ್ಯಾಯದ ಯೋಚನೆಯಿಂದ ಕಾರ್ಯ ಮಾಡುವುದು, ಸತ್ಯದ ಮಾತು ನಡೆಯಂತೆ ಕಾರ್ಯ ಮಾಡುವುದು, ಹೀಗೆ ದೇಶ, ಕಾಲ, ಉದ್ದೇಶ, ಔಚಿತ್ಯ ತಿಳಿದು ಜೀವನ ಸಾಧನೆ ಮಾಡುವರು. ಇದು ಸುಕ್ಷೇಮ ಎನಿಸಿಕೊಳ್ಳುತ್ತದೆ.ಆ ರೀತಿಯಿಂದ ಪ್ರಜೆಗಳು ಸುಕ್ಷೇಮಿಗಳು. ನಂಬಿದ ದೇವತಾ ಶಕ್ತಿಯಲ್ಲಿ ಅನುಮಾನವಿಲ್ಲದ ಅನನ್ಯ ಭಕ್ತಿ ಇರುವ ಕಾರಣ, ಕ್ಷಾಮ-ಡಾಮರ-ರೋಗ-ರುಜಿನ-ದಾರಿದ್ರ್-ಮುಂತಾದ ದುರಿತವನ್ನು ಅನುಭವಿಸಿದವರು ಅಲ್ಲ - ಕಂಡು ತಿಳಿದವರು ಅಲ್ಲ. ಬದುಕಿಗೆ ಬೇಕಾದ, ಸಾಧನೆಗೆ ಬೇಕಾದ ಯಾವುದೇ ಆದರ್ಶದ ಕೊರತೆ ನಮಗಿಲ್ಲ. ಸಂತೋಷ, ಸಂಭ್ರಮ ಸಮಾಧಾನ, ಸೌಖ್ಯ, ಅಯೋಧ್ಯೆಯಲ್ಲಿ ತುಂಬಿದೆ. ಓ.. ಯಾವುದೋ ಪ್ರಭೆಯೊಂದು ಸಭಾಸ್ತಾನವನ್ನು ಬೆಳಗುತ್ತಿದೆ. ಆಶ್ಚರ್ಯ ಕುತೂಹಲದಿಂದ ಈಕ್ಷಿಸಿದರೆ...

ಬಂದ ಮಾತಲಿಯ ನೀಕ್ಷಿಸಿ ಪೀಠವೀಯುತ|ವಂದಿಸಿ ಬೆಸಗೊಂಡನುII ವೃಂದಾರಕರಿಗೆಲ್ಲ ಕ್ಷೇಮವೇ ನೀನಿತ್ತ|ಬಂದಿರ್ಪ ಹದನವೇನುII

ದಶರಥ: ಓಹೋ.. ದೇವೇಂದ್ರನ ಸಾರಥಿ, ಮಾತಲಿ ಬಾ.. ಹೀಗೆ ಬಾರಯ್ಯ.. ನಿನಗೆ ವಂದನೆಗಳು. ಇದೋ ಪೀಠ, ವಿಶ್ರಮಿಸು. ಈ ಲೋಕಕ್ಕೆ ಹೊಂದಿ, ಗೃಹಸ್ಥ ಧರ್ಮದ ಆಚರಣೆಗೆ ಹೊಂದಿ, ಆತಿಥ್ಯ ನೀಡುತ್ತೇನೆ. ಸ್ವೀಕರಿಸಬೇಕು.


ಮಾತಲಿ: ಮಹಾರಾಜ ದಶರಥ, ವಂದಿಸಿದ್ದೇನೆ. ಎಲೈ ಮಹನಿಯನೇ, ನಿನ್ನ ಉತ್ತಮವಾದ ಮಾತನ್ನು, ಉತ್ತಮವಾದ ಸಂಸ್ಕಾರದ ನಡತೆಯ ಆಚರಣೆಯನ್ನು ಕಂಡು ಪ್ರಭಾವಿತನಾದೆ. ನಿನ್ನ ಧರ್ಮ ಕೆಡಬಾರದೆಂಬ ಕಾರಣಕ್ಕೆ, ಆತಿಥ್ಯ ಸ್ವೀಕರಿಸಿದ್ದೇನೆ. ಶುಭವಾಗಲಿ.


ದಶರಥ: ಕಾರಣವಿಲ್ಲದೆ ಬರುವವರು ನೀವಲ್ಲ. ಹಾಗೆಂದು, ಯಾಕೆ ಬಂದಿರಿ ಎಂದು ನಾನು ಕೇಳುವುದು ಸೌಜನ್ಯವೂ ಅಲ್ಲ. ನನ್ನ ಊಹೆಯಂತೆ ದೇವತೆಗಳೆಲ್ಲ ಕ್ಷೇಮವೇ? ದೇವಲೋಕದ ವ್ಯವಸ್ಥೆಗೆ ನನ್ನಿಂದ ಏನಾದರೂ ಸಹಾಯವಾಗಬೇಕೆ? ಯಾವುದೇ ಶಂಕೆ ಇಲ್ಲದೆ ದೇವತಾಧಿಕಾರಯುಕ್ತವಾಗಿ ಹೇಳಬಹುದು. ಕಾರಣ ಏನು? ಕಾರ್ಯ ಯಾವುದು?


ಮಾತಲಿ: ಹೇಗೆ ಹೇಳಲಿ.. ಎಂಬ ಆತಂಕವನ್ನು ದೂರ ಮಾಡಿದೆ. ಎಲೈ ಮಹನೆಯನೇ...

ಲಾಲಿಸು ದಶರಥೇಂದ್ರನೆ ಸ್ಪರ್ಗ ಸಂಪದI ಖೂಳರ ವಶವಾಯಿತುII ತೋಳ ಸತ್ವದಿ ನಿನಗೆಣೆಯಿಲ್ಲದಿವಿಜರI ಪಾಲಿಸು ನೀನೊಲಿದುII

ಮಾತಲಿ: ಮಹಾರಾಜ ದಶರಥೇಂದ್ರನೇ, ನಿನಗೆ ಜಯವಾಗಲಿ. ಅಯ್ಯಾ! ವೃಂದಾರಕರು ಈ ಕಾಲದಲ್ಲಿ ಕ್ಷೇಮವಾಗಿಲ್ಲ. ಪುಣ್ಯವಂತನಾದ ನೀವು ಮಾಡಿದ ಯಜ್ಞ-ಯಾಗಾದಿಗಳ ಬಲ ದೇವತೆಗಳಿಗೆ ತಲುಪಲೇ ಇಲ್ಲ. ಕಾರಣ, ದುರುಳರ ಕಪಟ ತಂತ್ರದಿಂದ ಮನುಜರ ಮತ್ತು ದಿವಿಜರ ಧಾರ್ಮಿಕ ಸಂಬಂಧ ತಪ್ಪಿದೆ. ಖಳನಾದ ಶಂಬರಾಸುರ ಎಂಬವನೊಬ್ಬ ತನ್ನ ಪಡೆಗೂಡಿ ದಾಳಿ ಮಾಡಿ, ದೇವತೆಗಳನ್ನು ಸೋಲಿಸಿ, ಸ್ವರ್ಗ ಸಂಪದ ಸೂರೆಗೈದ. ಅವನಿಗಿರುವ ವರಬಲ ಏನೆಂದು ತಿಳಿದಿಲ್ಲ. ಸೋತ ದೇವೇಂದ್ರ, ನಿನ್ನ ಸಹಾಯ ಯಾಚಿಸಿದ್ದಾನೆ. ಭುಜಬಲದಲ್ಲಿ, ಪರಾಕ್ರಮದಲ್ಲಿ, ಧರ್ಮರಕ್ಷಣೆಯಲ್ಲಿ, ನಿನಗೆ ಸಮಾನರಾದವರು ಯಾರು ಇಲ್ಲ. ಈ ಭುವಿಯಲ್ಲಿ ದಶ ದಿಕ್ಕುಗಳಲ್ಲಿಯೂ ನಿನ್ನ ರಥಕ್ಕೆ, ಯಾವ ವೈರದ ಅಡೆ-ತಡೆ ಇಲ್ಲದೆ ಸಂಚರಿಸುವ ಕಾರಣ, ನೀನು 'ದಶರಥೇಂದ್ರ'ಎಂಬ ಅನ್ವರ್ಥಕ ಬಿರುದು ಪಡೆದಿದ್ದೀಯೇ. ಎಲೈ ತೇಜೋವಂತನೇ, ಈ ಕಾಲಕ್ಕೆ ನಿನ್ನ ಅಮಿತ ಪರಾಕ್ರಮದಿಂದ, ಜ್ಞಾನದಿಂದ, ದೇವತೆಗಳನ್ನು ರಕ್ಷಿಸು. ಸ್ವರ್ಗದ ಶ್ರೀ ಸಂಪತ್ತನ್ನು ರಕ್ಷಿಸು, ಧರ್ಮವನ್ನು ರಕ್ಷಿಸು.


ದಶರಥ: ವೇದ ಬಲ್ಲವರು ಮಾತನಾಡಿದರೆ ವೇದ್ಯವಾಗದೆ ಉಳಿದೀತೆ. ಮಾತಲಿ! ಕೇಳು...

ದುರುಳ ಶಂಬರನ ನಿಗ್ರಹಿಸುತ ನಿಮಗಾದ|ಪರಿಭವ ಮರೆಸುವೆನು| ಬರುವೆ ನೀಕ್ಷಣವೆಂದು ಮಾವಲಿಗರುಹಿ ತನ್ನರಮನೆಗೈತಂದನುII

ದಶರಥ: ಯಾವುದೇ ಸಂಕೋಚ ಬೇಡ. ನಿಮಗೆ ಬಂದ ಕಷ್ಟ ಅಂದರೆ ಲೋಕಕ್ಕೆ ಬಂದ ದುರಿತ ಅಂತಲೇ ಅರ್ಥ. ಭಯ ಬೇಡ. ಅಧರ್ಮದ ದಾರಿಯಲ್ಲಿ ಸ್ವರ್ಗವೇರಿದ ಆ ಶಂಬರಾಸುರನನ್ನು ಶಿಕ್ಷಿಸಿ, ನರಕಕ್ಕೆ ಕಳುಹಿಸುತ್ತೇನೆ. ಇದು ನನ್ನ ಗೆಲುವಲ್ಲ. ನಿಮ್ಮದೇ ಗೆಲುವಾಗಲಿ, ಈ ಕ್ಷಣ ಬರುತ್ತೇನೆ. ಒಂದೇ ಕ್ಷಣದಲ್ಲಿ ಪತ್ನಿ ಕೈಕೇಯಿಗೆ ವಿಷಯ ತಿಳಿಸಿ ಬರ್ತೇನೆ. ಅಲ್ಲಿಯವರೆಗೆ ಸುಖವಾಗಿ ವಿರಮಿಸು.

[ಮುಂದಿನ ಭಾಗ,ಮುಂದಿನ ವಾರ]

Comments


bottom of page