top of page

ತಾಳಮದ್ದಳೆಯ ಕ್ರಮಗಳು - 5 (ಆಖ್ಯಾನ: ಪುತ್ರಕಾಮೇಷ್ಠಿ)

ಸುರಪನ ಸೋಲಿಸಿ ಸುರಸಿಂಹಾಸನ ವೇರಿIಮೆರೆದಿರೆ ಶಂಭರ ಮುದದಿ|| ಮರುಳರುಬ್ಬೇರಿ ದಬ್ಬಾಳಿಕೆ ತೋರಲು | ನರಕವಾಯಿತು ನಾಕ ಕ್ಷಣದಿII

ದೇವೇಂದ್ರ: ಹರಿಯೇ.. ಪರಮೇಶ್ವರ.. ಈ ದುರುಳ ಶಂಬರಾಸುರ ಯಾವ ವರವನ್ನು ಪಡೆದಿದ್ದಾನೋ, ಯಾವ ಶಕ್ತಿಯನ್ನು ಒಲಿಸಿದ್ದಾನೋ, ಆ ಶಿವನೇ ಬಲ್ಲ. ಅವನ ದಾಳಿಯನ್ನು ತಡೆಯಲಾರದೆ ದೇವತೆಗಳೆಲ್ಲ ಸ್ವರ್ಗ ತೊರೆದು ಓಡಿದ್ದೇವೆ. ಅಬ್ಬಾ ಅವನ ಕೃತ್ಯವೇ!, ಎಷ್ಟು ಬೇಗ ನಾಕ - ನರಕವೇ ಆಯ್ತಲ್ಲ ಏನು ಮಾಡಲಿ, ಹೇಗೆ ಸ್ವರ್ಗವನ್ನ ರಕ್ಷಿಸುವುದು, ಯಾರು ನಮಗೆ ಸಹಾಯ ಮಾಡುತ್ತಾರೆ.


ವೈಧಿಸುತ ಶಕ್ರ ಮಾತಲಿಯನ್ನು ಕರೆದೆಂದ|ಗತಿಯೇನು ಮುಂದಿನ್ನು ನಮಗೆ IIಅತಿ ಬೇಗದಿಂದಲಯೋಧ್ಯೆಯನ್ನು ಸೇರಿ ನೀ | ಕಥಿಸಿ ನೀ ಕಷ್ಟವನಜ ಸುತಗೆ ||

ದೇವೇಂದ್ರ: ಮಾತಲಿ, ನೋಡಿದೆಯಾ, ದುರುಳ ರಕ್ಕಸರ ಉಪಟಳದ ದಾಳಿಯನ್ನು. ಬಹುಜನರ ಪುಣ್ಯದ ಬಲದಿಂದಲೇ ಸ್ಥಾಪಿತವಾದ ಈ ನಾಕ ಲೋಕವನ್ನು ಕೆಡಿಸಿಬಿಟ್ಟರು. ಲೋಕಪಾಲನಾದ ನಾನೇ ಅಧೀರನಾದೆ. ನಮಗಿನ್ನೇನು ಗತಿ. ಬೆಂಬಲಕ್ಕೆ ಯಾರಿಗೆ ಮೊರೆ ಹೋಗುವುದು.


ಮಾತಲಿ: ದೇವರಾಜ! ನಮಗೊದಗಿದ ಈ ದುರ್ದಶೆಯಲ್ಲಿ ನಿರಾಶನಾದರೆ ಬುದ್ಧಿ ಚುರುಕಾಗಿರುವುದಿಲ್ಲ. ನಡೆಯುವ ದಾರಿಯಲ್ಲಿ ಹಳ್ಳ-ಕೊಳ್ಳಗಳಿದ್ದರೂ, ಮುಳ್ಳು-ಕಲ್ಲುಗಳಿದ್ದರೂ, ವಿವೇಕಿಯಾದರೆ, ಚತುರನು ಆಗಿದ್ದರೆ, ಅಪಘಾತವಾಗದಂತೆ ಚಲಿಸಬಲ್ಲ. ಈ ದುರುಳನ ಕೃತಿ ವಿಪರೀತಗಳನ್ನು ಕಂಡು, ಆಲೋಚನೆಯ ಹೊಳಹಿನಲ್ಲಿ ನನಗೆ ತಿಳಿದಿದ್ದು, ಇವನನ್ನು ಗೆಲ್ಲುವಡೆ ಮಾನವ ಸಹಾಯವೇ ಸೂಕ್ತ, ಎಂದೆನಿಸುತ್ತದೆ.


ದೇವೇಂದ್ರ : ಸಾರಥಿ - ರಥಿಕರ ಯೋಚನೆ - ಯೋಜನೆ ಒಂದೇ ಆಗಿದ್ದರೆ ಗುರಿ ಸಾಗುವುದು ಸುಲಭ ಹಾಗೂ ಬೇಗ. ನನ್ನ ಆಲೋಚನೆಗೆ ನಿನ್ನ ಸಲಹೆ ಸರಿಯಾಗಿ ಹೊಂದಿಕೊಂಡಿದೆ. ಮನುಜರಲ್ಲಿ ಈ ಕಾಲಕ್ಕೆ ನಮಗೆ ಸಹಾಯ ಮಾಡುವಷ್ಟು ಘನತೆ ಇರುವವ ಅಯೋಧ್ಯೆಯಲ್ಲಿ ಚಕ್ರವರ್ತಿಯಾಗಿ ಪ್ರಜಾ ಪಾಲನೆ ಮಾಡುತ್ತಿರುವ, ಅಜರಾಜನ ಮಗನಾದ ದಶರಥ ಮಹಾರಾಜ. ಮಾತಲಿ! ಕೂಡಲೇ ಹೊರಡು. ದಶರಥನನ್ನು ಕಂಡು ನಮಗೆ ಬಂದ ಕಷ್ಟವನ್ನು ಅರುಹು.‌ ನನಗೆ ನಂಬುಗೆ ಇದೆ, ನಮ್ಮ ಪರಿಭವನ್ನು ತಿಳಿದ ಆ ಮಹಾರಾಜ...

ಇನವಂಶ ವಿಖ್ಯಾತನವನು ಬೆಂಬಲ ನೀಡಿIಹನನ ಗಯ್ಯುವ ನೀ ಶಂಬರನ|ಅನುಮಾನವಿಲ್ಲ ಪೋಗೆಂದು ಬೀಳ್ಕೊಟ್ಟನ |ಕ್ಷಣವೇ ಮಾತಲಿ ಭೂಮಿಗಿಳಿದII

ದೇವೇಂದ್ರ: ಸೂರ್ಯವಂಶೋದ್ಭವನಾದ ದಶರಥ ನಿಯಮ ನಿಷ್ಠೆಯಲ್ಲಿ ಗಟ್ಟಿಗ. ಧಾರ್ಮಿಕ ಆಚರಣೆಯಲ್ಲಿ ಋಷಿ ಸಮಾನ ಸಾಧಕ. ಧರ್ಮ-ಪೂಜಾ ಪರಿ ಪಾಲನೆಯಿಂದ ವಿಕ್ಯಾತ. ಮೇಲಾಗಿ ಸೂರ್ಯವಂಶಕ್ಕೂ, ಈ ಸ್ವರ್ಗಲೋಕದ ಆಡಳಿತಕ್ಕೂ ಹಿಂದಿನಿಂದಲೂ ಸಂಬಂಧವಿದೆ. ಈಗ ಬಂದಿರುವ ಪರಿಭಾವಕ್ಕೆ ದಶರಥ ನಮಗೆ ರಕ್ಷಣೆಯ ಬೆಂಬಲ ನೀಡುತ್ತಾನೆ. ಹುಟ್ಟಿನಿಂದಲೂ ಸ್ವಭಾವದಲ್ಲಿಯೂ ಶೂರನು, ಪರಾಕ್ರಮಿಯು ಆದ ಆತ ಈ ದುರುಳ ಶಂಬರನನ್ನು ಸೋಲಿಸುತ್ತಾನೆ. ಅಥವಾ ಹನನಗಯ್ಯುತ್ತಾನೆ. ಬೇಗ ಹೋಗಿ ಅವನನ್ನು ಕರೆದುಕೊಂಡು ಬಾ. ಶುಭವಾಗಲಿ.


ಮಾತಲಿ: ಹಾಗೆ ಆಗಲಿ. ದೇವರಾಜ! ಈ ಕ್ಷಣವೇ ಅಯೋಧ್ಯೆಗೆ ಹೋಗಿ ದಶರಥ ಚಕ್ರವರ್ತಿಯನ್ನು ಕರೆದುಕೊಂಡು ಬರ್ತೇನೆ. ಎಲ್ಲರಿಗೂ ಶುಭವಾಗಲಿ.

Comments


bottom of page