top of page

ತಾಳಮದ್ದಳೆಯ ಕ್ರಮಗಳು - 3 (ಆಖ್ಯಾನ: ಪುತ್ರಕಾಮೇಷ್ಠಿ)

ದೇವೇಂದ್ರ: ನಿಮ್ಮ ಮಾತು ಒಪ್ಪುವಂತದ್ದೇ ಹೌದು. ಸಂತೋಷವಾಯ್ತು.


ಅಷ್ಟದಿಕ್ಪಾಲಕರು ಭರವಸೆ | ಗೊಟ್ಟು ನುಡಿಯೆ ಸುರೇಂದ್ರ ಕೇಳುತ | ಹೃಷ್ಟ ಮಾನಸನಾಗಿ ತಾನೆಸದಿIರ್ದ ಸ್ವರ್ಗದಲಿII

ದೇವೇಂದ್ರ : ನಿಮ್ಮ - ಶೌರ್ಯ ಧೈರ್ಯದ ಬಗ್ಗೆ ಅನುಮಾನವೇನು ಇಲ್ಲ.ಆದರೂ, ಸದಾ ಕಾರ್ಯ ಶೀಲರಾಗಿರಬೇಕು, ಪ್ರತಿಕ್ಷಣದಲ್ಲಿಯೂ ಎಚ್ಚರಿಕೆ ಇರಲೇಬೇಕು. ಆಗಲಿ, ಆಗಲಿ ಎಂದೋ - ಏನೋ ಆಗಿ ಬಿಡಬಹುದೆಂಬ ಆತಂಕ, ಭಯದಲ್ಲಿ ಇಂದಿನ ಸಂತೋಷವನ್ನು ಕಳೆದುಕೊಳ್ಳುವುದು ಬೇಡ. ಎಲ್ಲರೂ ಸಂತೋಷದಿಂದ ಇರೋಣ. ಎಲ್ಲರೂ ನಮ್ಮ ನಮ್ಮ ಸ್ಥಾನಗಳಿಗೆ ತೆರಳೋಣ, ಏಳಿ.

ree

[ಪ್ರತಿ ದೃಶ್ಯಕ್ಕೂ ಆರಂಭ ಮತ್ತು ಮುಕ್ತಾಯ ಇರಬೇಕು. ಒಂದೆರಡು ಮಾತಿನಲ್ಲಿ ಇಡೀ ದೃಶ್ಯದ ಸಾರಾಂಶ ಹೇಳಿ, ದೃಶ್ಯ ಮುಕ್ತಾಯ ಮತ್ತು ಮುಂದಿನ ದೃಶ್ಯದ ಸೂಚನಾತ್ಮಕ ಅಂಶ ಹೇಳಿ, ಮುಗಿಸಬೇಕು. ಇದು ಪ್ರದರ್ಶನದ ವೇಗ ಮತ್ತು ಇಡೀ ಕಥೆಯ ಓಟಕ್ಕೆ ಅನುಕೂಲವಾಗುತ್ತದೆ.]


[ಪುತ್ರಕಾಮೇಷ್ಟಿಯ ಈ ಕಥಾ ಪ್ರಸಂಗದಲ್ಲಿ ಶಂಬರಾಸುರ ಎಂಬ ರಾಕ್ಷಸನ ಪ್ರವೇಶ, ಪರಿಚಯ ಕಾರ್ಯವಿದೆ. ಆಟದಲ್ಲಿ ಪ್ರವೇಶದ ವಿಧಾನಗಳು ಬೇರೆಯಾಗಿಯೇ ಇವೆ.]


ದಿಟ್ಟ ಶಂಬರನೆಂಬ ಕರ್ಬುರ | ಸೃಷ್ಟಿಸಿದನು ವೈಜಯಂತಿ |ಪಟ್ಟಣದಿ ರಕ್ಕಸರ ಗಡನವ ಕೂಡಿ ಯೋಚಿಸಿದII

[ಇಲ್ಲಿ "ಸೃಷ್ಟಿಸಿದ ನುರು ವೈಜಯಂತಿ ಪಟ್ಟಣ "ಎಂಬ ಹೇಳಿಕೆ ಎರಡು ಕಾರ್ಯ ವಿಷಯವನ್ನು ಹೇಳುತ್ತದೆ.

  • ಮೊದಲೇ ಸೃಷ್ಟಿಯಾಗಿದ್ದ ವೈಜಯಂತಿ ಪಟ್ಟಣದಲ್ಲಿ ಎಂದೂ

  • ಶಂಭರಾಸುರನೇ ವೈಜಯಂತಿ ಪಟ್ಟಣವನ್ನು ಸೃಷ್ಟಿಸಿದ ಎಂದು ]


ಶಂಭರಾಸುರ: ಓ..ಹೋ..ಹೋ ಶಂಭೋ ಶಂಕರ - ಹಾ! ನಮ್ಮ ಪರಿಚಯ ಹೇಳುವುದಕ್ಕಾಗಿ, ನಾವೇ ನಮ್ಮ ಗುರುತನ್ನ ಮೂಡಿಸಿದ್ದೇವೆ. ಈ ..ವೈ ಜಯಂತಿ ನಗರವನ್ನು ನಾನೇ ಕಟ್ಟಿದ್ದು. ಹೇಗಿದೆ, ಎಂದು ಬೇರೆಯವರು ಹೇಳಬೇಕಾಗಿಲ್ಲ. ಹೇಳಿಕೊಳ್ಳುವುದಕ್ಕೆ ಹೆಸರು ಉಂಟು. ದಾನವ ವಂಶೋತ್ಪನ್ನ, ಶಂಭರಾಸುರ, ಕರ್ಬುರ ವರ್ಗದವ. ನಮ್ಮ ನಮ್ಮಲ್ಲಿಯ ಗುರುತು. ಕೇವಲ ಇಷ್ಟೇ ಪರಿಚಯ ಸಾಲದು, ನಾವು ಜಗದ್ವಿಖ್ಯಾತರಾಗಬೇಕು, ಅತುಲ ಸಂಪದ್ಭರಿತರಾಗಬೇಕು. ಬೇರೆಲ್ಲ ಸಂಪತ್ತಿದ್ದೆ ಅದನ್ನು ಗೆದ್ದು ತರಬೇಕು. ನನ್ನ ಮಾತನ್ನು ಶಿರಸಾ ವಹಿಸಿ, ಕಾರ್ಯ ಮಾಡುವುದಕ್ಕೆ ರಕ್ಕಸ ಗಡಣವೇ ನೆರೆದಿದೆ. ನನ್ನ ಪರಿವಾರದವರೇ -


ವೀರ ಧೈತ್ಯರು ಕೇಳಿ ನೀವೆಲ್ಲರೂ Iಬೂರಿ ವಂಚನೆಯಿಂದ ದುರ್ವಿಧಿ |ಸೇರಿಹುದು ನಮಗೀಗಳು II

ಶಂಭರಾಸುರ: ಪರಿವಾರದ ವೀರ ದೈತ್ಯರೇ,ನೀವು ಮುಗ್ಧರು. ನಾವೇಕೆ ಕಷ್ಟಪಡುತ್ತಿದ್ದೇವೆ, ಎಂದು ನೀವು ಆಲೋಚಿಸುವುದೇ ಇಲ್ಲ. ಎಲೈ ಬಂಧುಗಳೇ, ನಾವೆಲ್ಲರೂ ಮೋಸಕ್ಕೆ, ವಂಚನೆಗೆ ಒಳಗಾಗಿದ್ದೇವೆ. ಹಾಗಾಗಿ ಯಾವಾಗಲೂ, ಕಾಡುಮೇಡಿನಚಳಿ-ಮಳೆಯಲ್ಲಿ ಒದ್ದಾಡುವುದೇ ನಮ್ಮ ದುರ್ವಿಧಿಯಾಗಿದೆ. ಇದಕ್ಕೆಲ್ಲಾ ಕಾರಣ -


ಶಕ್ತಿಯಿಂದಲಿ ವಾರಿಧಿ ಮತಿಸಿದ |ದೈರ್ಯರಿಗೆ ವನವಾಸ ಸುರರಿಂ |ಗತ್ಯಧಿಕ ಸುಖ ದೊರೆತುದು II

ಶಂಬರಾಸುರ: ಆ ದುರುಳ ದೇವೇಂದ್ರ ಸ್ವರ್ಗಾಧಿಪತಿ. ತಾನೆ ಶ್ರೇಷ್ಠ ಎಂದು, ಗರ್ವದಿಂದ ತನ್ನ ಸರ್ವ ಸಂಪತ್ತನ್ನು ಕಳೆದುಕೊಂಡ. ದೂರ್ವಾಸ ಶಾಪದ ಪರಿಣಾಮ, ಸ್ವರ್ಗದ ಸಿರಿಯೆಲ್ಲ ಶರಧಿ ಪಾಲಾಯಿತು. ಅದನ್ನು ಪಡೆಯುವುದಕ್ಕೆ ಸಮುದ್ರಮಥನವೇ ಉಪಾಯ ಎಂಬ ತೀರ್ಮಾನ ತ್ರಿಮೂರ್ತಿಗಳಿಂದ ಬಂದ ಕಾರಣ, ಆ ದೇವೇಂದ್ರ ಸಮುದ್ರಮಥನಕ್ಕೆ ಸಹಾಯ ಮಾಡಿ, ಬಂದ ಸುವಸ್ತುಗಳಲ್ಲಿ, ನಿಮಗೆ ಸಮಪಾಲು, ಎಂದು ನಮ್ಮ ಹಿರಿಯರನ್ನು ನಂಬಿಸಿದ, ಒಪ್ಪಿಸಿದ. ಸಮುದ್ರಮಥನ ಮಾಡಿದ. ಬಂದ ಸುವಸ್ತುಗಳೆಲ್ಲನ್ನು, ನಮಗೆ ನೀಡದೆ ಮೋಸ ಮಾಡಿದ್ದಾನೆ. ಶರಧಿ ಮಥನ ಮುಗಿದ ಮೇಲೆ, ಸಲ್ಲದ ವಿಚಾರ ಹೇಳಿ, ನಮ್ಮವರನ್ನು ಬಡಿದಟ್ಟಿದ್ದಾನೆ. ಸುವಸ್ತುಗಳ ಭಾಗ್ಯವನ್ನು ಅನುಭವಿಸುತ್ತಾ, ಸ್ವರ್ಗ ಸುಖದಲ್ಲಿ ಮೈಮರೆತಿದ್ದಾನೆ. ಇದೇ, ನಮಗೆ ಸರಿಯಾದ ಸಮಯ. ನಮಗೆ ಸೇರಬೇಕಾಗಿದ್ದನ್ನು ಪಡೆಯುವ ಸಮಯ. ಆ ಕಾರಣಕ್ಕಾಗಿ-


ತೋರಿ ಧೈರ್ಯವ ಏರುತ ಸ್ವರ್ಗವ | ಗಾರುಗೆಡಿಸುತ ಸುರರ ನೋಡಿಸಿ | ಸೌರ ಸೌಖ್ಯವ ಪಡೆಯುವ II

ಶಂಭರಾಸುರ: ಯುದ್ಧಕ್ಕೆ ಸಿದ್ದರಾಗಿ. ದೈರ್ಯದಿಂದ ,ವಿಶ್ವಾಸದಿಂದಿರಿ.ನಮಗೆ ಸ್ವರ್ಗ ಸಂಪತ್ತಿನಲ್ಲಿ ಪಾಲಿದೆ, ಎಂಬ ಅಧಿಕಾರದಿಂದ, ಸ್ವರ್ಗಲೋಕಕ್ಕೆ ದಾಳಿ ಮಾಡೋಣ. ನೀವು ಒಬ್ಬೊಬ್ಬರು, ಜಗತ್ತನ್ನೇ ನಡುಗಿಸಬಲ್ಲ ಪರಾಕ್ರಮಿಗಳು. ವೀರ ತನದಿಂದ, ದೇವತೆಗಳನ್ನೆಲ್ಲ ಓಡಿಸೋಣ. ಸ್ವರ್ಗ ಸುಖ -ಭೋಗಗಳನ್ನು ಪಡೆದು, ಇನ್ನು ಮುಂದೆ ಯಾವತ್ತೂ ಸುಖವಾಗಿರೋಣ. ಇದೇ ಸರಿ ಸಮಯ, ಹೊರಡೋಣ.

Comments


bottom of page