top of page

ತಾಳಮದ್ದಳೆಯ ಕ್ರಮಗಳು - 2 (ಆಖ್ಯಾನ: ಪುತ್ರಕಾಮೇಷ್ಠಿ)

ಉದಾಹರಣೆಯೊಂದಿಗೆ ಮುಂದುವರೆಯೋಣ -

ದೇವೇಂದ್ರನ ಓಲಗದ ಸಂದರ್ಭ - ಸಭಾವರ್ಣನೆ, ತತ್ಕಾಲದ ವಿವೇಚನೆ ಮುಗಿದಲ್ಲಿಗೆ ಕಥಾ ಪ್ರವೇಶ - ವಿಷಯ ವಿಸ್ತಾರಕ್ಕೆ ಮಾತು-

ದೇವೇಂದ್ರ : ನಾವು ಸದಾ ಕಾಲ ಎಚ್ಚರದಿಂದಲೇ ಇರಬೇಕಾದ ಅನಿವಾರ್ಯತೆ ಇದೆ ಅದೇನೆಂದರೇ....


ಕೇಳಿರೋ ತ್ರಿದಶರೆಲ್ಲ | ನಮ್ಮಯ ಪುಣ್ಯ | ದೇಳಿಗೆಗಳತೆಯಿಲ್ಲ II ಆಲೋ ಚಿಸುತಲಿದ ಖೂಳರು ಕರುಬುತ | ಮೇಲೇರಿ ದಾಳಿಗೈಯ್ಯುವರಲ್ಲ II

(ಈ ಪದ್ಯ ತುಂಬಾ ಸರಳವಾಗಿದೆ, ಆಡುವ ಮಾತಿನಂತೆ ನೇರವಾಗಿ ವಿಷಯ ಹೇಳಲ್ಪಟ್ಟಿದೆ)

ದೇವೇಂದ್ರ: ತ್ರಿದಶ (ಮೂವತ್ಮೂರು) ಕೋಟಿ ದೇವತೆಗಳೆ, ಆಸಕ್ತಿಯಿಂದಲೂ, ಲಕ್ಷ್ಯದಿಂದಲೂ ಕೇಳಿ - ಈ ಸ್ವರ್ಗದ ವಾಸವೂ, ಅಧಿಕಾರವೂ, ಕೇವಲ ತ್ರಿಮೂರ್ತಿಗಳ ಕರುಣೆಯಿಂದ ಮಾತ್ರವೇ ದೊರಕಿದ್ದಲ್ಲ. ಅವರ ಅನುಗ್ರಹ ಪಡೆಯುವುದಕ್ಕೂ ಪೂರ್ವದಲ್ಲಿ, ನಾವು ಆಚರಿಸಿದ ಪುಣ್ಯವೇ ಯೋಗ್ಯತೆಯನ್ನು ಕೊಟ್ಟಿದೆ. ಇಷ್ಟು ಪುಣ್ಯಕ್ಕೆ, ಇಷ್ಟು ಫಲ ಎಂಬ ಯಾವುದೇ ಮಾನವಿಲ್ಲ, ಹಾಗಾಗಿ ನಮ್ಮ ಪುಣ್ಯದೇಳಿಗೆಗೆ ಅಳತೆ ಇಲ್ಲ. ಅಮೃತ ಕುಡಿದಿದ್ದೇವೆ, ದಿವ್ಯಾಸ್ತ್ರಗಳ ಸಂಗ್ರಹವಿದೆ, ದೇವತ್ವದ ದ್ಯೋತಕವಾದ ವರ ನೀಡುವ ಶಕ್ತಿ ಇದೆ, ಕಾರ್ಯಕಾರಣ ಕರ್ತೃತ್ವ ತಿಳಿದು ಇಷ್ಟದ ರೂಪ ಧರಿಸುವ ಶಕ್ತಿಯಿದೆ. ಈ ಎಲ್ಲ ದಿವ್ಯತೆಯೂ ಲೋಕಪಾಲನೆಗೆ ಎಂಬ ವಿವೇಕವಿದೆ, ನಮ್ಮ ಯಾವ ಕೆಲಸ ಕಾರ್ಯಗಳೂ ನಮ್ಮ ಸ್ವಾರ್ಥಕ್ಕೆ ಎಂಬ ಮನೋಭಾವನೆಯಿಲ್ಲ. ಸ್ವಾರ್ಥವನ್ನು ಚಿಂತಿಸುವ ಹಾಗೂ ಇಲ್ಲ. ಅದು ನಮಗೆ ಶಾಸನ - ಹಾಗಾಗಿ ನಾವು ಸುಮನಸರು. ಯಾವತ್ತಿಗೂ ಈ ಭಾವವನ್ನೇ ಆಚರಿಸುವ ಕಾರಣ, ನಾವು ದೇವತೆಗಳು ಎನಿಸಿಕೊಂಡಿದ್ದೇವೆ. ಎಲೈ ದೇವತಾ ಸಮೂಹದವರೇ! ನಮ್ಮ ಘನತೆ, ವೈಭವ, ಕಾರ್ಯದಕ್ಷತೆ, ಕಾರ್ಯಶೀಲತೆ ಎಲ್ಲವೂ ಹೀಗಿದ್ದರೂ, ಇದನ್ನು ದ್ವೇಷದಿಂದ ವಿಚಾರಿಸುವವರಿದ್ದಾರೆ. ಮುಖ್ಯವಾಗಿ ಅವರಲ್ಲಿ ಖೂಳರಾದ ರಾಕ್ಷಸರು. ಹೇಳಿ ಕೇಳಿ - ಲೋಕವ್ಯಾಪಾರಕ್ಕೆ ಸಂಬಂಧಿಸಿದಂತೆ, ದೈತ್ಯರು, ದಾನವರು, ನಮಗೆ ದಾಯವಾದಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ದೈತ್ಯರಿಗೆ - ದೇವತೆಗಳಿಗೆ ತಂದೆ ಒಬ್ಬನೆ, ತಾಯಂದಿರು ಬೇರೆ. ಹುಟ್ಟಿನಿಂದಲೇ ದೇವತೆಗಳಾದವರಿದ್ದೇವೆ. ಕಾರ್ಯಸಾಧನೆಯಿಂದ, ತಪಸ್ಸಿನಿಂದ, ಇಷ್ಟ ದೈವದ ಅನುಗ್ರಹದಿಂದ ದೇವತಾವರ್ಗಕ್ಕೆ ಸೇರಿದವರಿದ್ದೇವೆ. ಹೀಗಿರುವ ಈ ಸ್ವರ್ಗ - ಸುಖದ ನೆಲೆ ಎಂಬಷ್ಟೇ ವಿಚಾರ ತಿಳಿದ ಖೂಳರು, ದೇವತೆಗಳು ಕೇವಲ ಭೋಗಿಗಳು, ಆ ಭೋಗ ನಮಗೂ ಸಲ್ಲಬೇಕು ಎಂದು ದುರಾಸೆಯಿಂದ ಆಲೋಚಿಸಿ ನಮ್ಮನು ಕಂಡು ಕರುಬುತ್ತಾರೆ. ಸ್ವರ್ಗ ಪಡೆಯುವ ಋಜು ಮಾರ್ಗ ಬಿಟ್ಟು , ವಾಮ ಮಾರ್ಗದಲ್ಲಿ ಸ್ವರ್ಗಕ್ಕೆ ದಾಳಿ ಮಾಡುತ್ತಾರೆ. ವಿಚಿತ್ರವಾದ, ಭಯಂಕರವಾದ ವರಪಡೆದು ನಮ್ಮ ಮೇಲೆ ಯುದ್ಧ ಸಾರುತ್ತಾರೆ. ಕೆಲವು ಬಾರಿ ಸೋತರೂ, ಹಲವು ಬಾರಿ ಗೆದ್ದು ಈ ನಾಕವನ್ನು ನರಕವಾಗಿಸುತ್ತಾರೆ. ಖೂಳರ ಸ್ವಾರ್ಥ ಚಿಂತನೆಯನ್ನು ಬದಲಿಸುವಲ್ಲಿ ನಾವು ಯಾವಾಗಲೂ ಸೋಲುತ್ತೇವೆ. ಸುಂದರ ಸ್ವರ್ಗವನ್ನು ಕಳೆದುಕೊಂಡು, ಅನೇಕ ಬಾರಿ ದುಃಖಿಗಳಾಗಿದ್ದೇವೆ, ಗಿರಿ - ಗುಹಾಂತರದಲ್ಲಿ ವಾಸಿಸಿದ್ದೇವೆ. ಖೂಳ ದಾನವರ ಬಗೆಗಾಗಿ ನೀವೇನು ಆಲೋಚನೆಯಲ್ಲಿದ್ದೀರಿ. ಅವರ ದಾಳಿಯನ್ನು ಎದುರಿಸುವಲ್ಲಿ ನಿಮ್ಮ ಸಾಮರ್ಥ್ಯ, ಸಮರ್ಥನೆಯೇನು: ನಿಮ್ಮ ಮನದ ಮಾತನ್ನು ಹೇಳಿ.

(ಮುಂದಿನ ಪದ್ಯದಲ್ಲಿ ಯಮನಿಗೆ ಉದ್ದೇಶಿತ ಪದಗಳಿರುವ ಕಾರಣ ಅಷ್ಟದಿಕ್ಪಾಲಕರ ಅಭಿಪ್ರಾಯಗಳನ್ನು ಯಮನೇ ಹೇಳಿದ್ದಾನೆ ಎಂದು ಸೂಚಿಸಲ್ಪಟ್ಟಿದೆ.)


ಯಮ: ಈಗ ಈ ವಿಚಾರದಲ್ಲಿ ಮನಸ್ಸಿನ ಮಾತು ಹೇಳಬೇಕಾಗಿಯೇ ಇಲ್ಲ. ಯಾಕೆಂದರೆ ಇದೇನು ಗಂಭೀರವಾದ ವಿಷಯವೇ ಅಲ್ಲ. ಹಾಗಾಗೀ...

ಭೈರವಿ ಏಕ ಬಿಡು ನಿರ್ಜರಪತಿ ಭಯವ | ಇ |ಲ್ಲಡಿ ಇಡೆ ಕರ್ಬುರ ಬಲವ II ಬಡಿದುರುಳಿಸುವೆನು ಇಳೆಗೆ | ನ | ಮ್ಮೊಡನವರಧಟದು ಬರಿದೆ II

ಯಮ: ಅಯ್ಯಾ ದೇವರಾಜಾ, ಆ ಖೂಳ ದನುಜರ ಬಗ್ಗೆ ಭಯ ಬೇಡ. ಯಾವುದೇ ರೀತಿಯಲ್ಲೂ ಅವರಿಲ್ಲಿಗೆ ಬಂದರೆ ನಮ್ಮ ಸರ್ವಸಾಮರ್ಥ್ಯದಿಂದ ಬಡಿದುರುಳಿಸುತ್ತೇವೆ. ಯಾವುದೇ ವರಬಲವಿದ್ದರೂ ನಮ್ಮಿದಿರು ವ್ಯರ್ಥ. ಆದರೂ ಅಹಂಕಾರದಿಂದ ಬರುವ ಅವರು ನನ್ನನ್ನು ಎದುರಿಸಬಲ್ಲರೇ?!, ಯಾಕೆಂದರೆ ನನ್ನ ಆಯುಧ.......

ಭೈರವಿ ಏಕ ಯಮ ದಂಡವನೆದುರಿಪರೆ | ಆ | ಕುಮತಿಗಳಿಲ್ಲಿಗೆ ಬಹರೆI ಭ್ರಮಯೇತಕೆ ಬರಿದಿಂತು I ಸ I ಕ್ರಮದಲಿ ನಲಿಯುವದೊಳಿತು II

ಯಮ: ಜೀವಿಗಳಿಗೆಲ್ಲ ಅವರ ಭವದ ಯುದ್ಧವನ್ನೇ ಕೊನೆಗಾಣಿಸುವವ ನಾನು, ಮೃತ್ಯು - ಇದೋ ಇದು ಯಮ ದಂಡ, ಪಾಪಿಗಳ ದಂಡನೆಗಾಗಿಯೇ ಇದೆ. ಇದನ್ನು ಎದುರಿಸಿ ಬದುಕಿದವರಿಲ್ಲ. ನಾನಿಲ್ಲಿರುವ ಕಾರಣ ಆ ಕುಮತಿಗಳು ಬರಲಾರರು. ಎಂದೋ, ಏನೋ ಆಗುವುದು ಎಂಬ ಭಯ ಭ್ರಮೆ ಬೇಡ . ನಿರ್ಧರಿತ ಕ್ರಮದಲ್ಲಿ ಸಂತೋಷವಾಗಿರೋಣ. ಎಲ್ಲವೂ ಶುಭವಾಗಲಿ.

Comments


bottom of page