ಶಿಸ್ತುಬದ್ಧತೆ ಮತ್ತು ನಿಯಮಗಳು - 1 (ತಾಳಮದ್ದಳೆ ಪ್ರಪಂಚ)
- Dheemahi Yakshagana Kala Kendra Sirsi Trust
- Jun 25
- 1 min read
ತಾಳಮದ್ದಳೆಯಲ್ಲಿ ಪಾತ್ರಧಾರಿಗಳು ಪಾಲಿಸಬೇಕಾದ ಶಿಸ್ತುಬದ್ಧತೆ ಮತ್ತು ನಿಯಮಗಳು
ಈಗ ತಾಳಮದ್ದಲೆಯಲ್ಲಿ ಭಾಗವಹಿಸುವ ಕಲಾವಿದರು ವಸ್ತ್ರ ಸಂಹಿತೆಯನ್ನು ಪಾಲಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಬಿಳಿಯ ವರ್ಣದ ಲುಂಗಿ, ತಿಳಿಯ ವರ್ಣದ ಅಂಗಿ ಹಾಗೂ ಅದಕ್ಕೆ ಒಪ್ಪುವ ಶಲ್ಯ, ಹಾಗೇ ಹಣೆಯ ಮೇಲೊಂದು ತಿಲಕ - ಹೀಗಿದ್ದರೆ ಕಲಾವಿದ ವ್ಯಕ್ತಿಗೆ ಗೌರವವಾಗಿ ಕಂಡು ಬರುತ್ತದೆ.

ಅರ್ಥಗಾರಿಕೆಯ ನಿಯಮಗಳನ್ನು ಆಲೋಚಿಸಿದಾಗ
ಶೃತಿ ಸೇರಿದ ಸ್ವರ ಅಥವಾ ಶೃತಿ ಬದ್ಧವಾದ ಮಾತು ಭಾಗವತರು ಯಾವ ಶೃತಿಯನ್ನು ಸೂಚಿಸಿದ್ದಾರೋ ಅದೇ ಶೃತಿಗೆ ಹೊಂದಿ ಮದ್ದಲೆ - ಚಂಡೆ ವಾದನಗಳು ಇರಬೇಕು. ಹಾಗೆಯೇ, ಕಲಾವಿದ, ಅರ್ಥಧಾರಿಯ ಸ್ವರ ಮತ್ತು ಮಾತು, ಶೃತಿ ಬದ್ಧವಾಗಿರಬೇಕು. ಇದು ಕೇವಲ ಆಲೋಚನೆಯಿಂದಲೋ, ಬರೆಯುವುದರಿಂದಲೋ ಅರ್ಥವೂ ಆಗುವುದಿಲ್ಲ. ಇದು ಅಭ್ಯಾಸದಿಂದ ಸಾಧ್ಯ. ಅಭ್ಯಾಸಕ್ಕೆ ಸಂಗೀತ ಉಪಕರಣ - ಹಾರ್ಮೋನಿಯಂ ( ಸ್ವರಮಂಜರಿ) ನಿಂದ ಅಭ್ಯಸಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಸ್ವರವೂ ಮಂದ್ರ - ಮಧ್ಯಮ - ತಾರ(ಕ)ದಲ್ಲಿ ಇದ್ದೇ ಇರುತ್ತದೆ. ಆದರೆ ಅವನು ಸುಲಭವಾಗಿ ಯಾವ ಸ್ಥಾಯೀ ಸ್ವರದಲ್ಲಿ ಅಂದರೆ ಏರಿಳಿತದಲ್ಲಿ ಮಾತನಾಡುತ್ತಾನೆ, ಎಂದು ಅವರೇ ಗುರುತಿಸಿಕೊಳ್ಳಬೇಕು. ಸಾಮಾನ್ಯವಾಗಿ ಹೃಸ್ವ ಅಕ್ಷರ ಮಂದ್ರ ಅಥವಾ ಮಧ್ಯಮದಲ್ಲೂ, ದೀರ್ಘಾಕ್ಷರವು ತಾರಕದಲ್ಲೂ ಕೂಡಿಸುವುದು ಸುಲಭ. ಅಭ್ಯಾಸ - ಅಧ್ಯಯನದಿಂದಲೇ ಅರ್ಥವಾಗುತ್ತದೆ.
ಸಾಹಿತ್ಯ ಪೂರ್ಣ ವಾಕ್ಯರಚನೆ ಅರ್ಥಗಾರಿಕೆಯಲ್ಲಿ - ಆಡು ಭಾಷೆಗಿಂತಲೂ, ಗ್ರಾಂಥಿಕವಾದ, ವ್ಯಾಕರಣ ದೋಷಗಳಿಲ್ಲದ ವಾಕ್ಯರಚನೆಗೆ ಮಹತ್ವ. ಮಾತಿನಲ್ಲೂ ಹಾಗೇ ಇರಬೇಕು. ಅಲ್ಪಪ್ರಾಣ, ಮಹಾಪ್ರಾಣ, ದೀರ್ಘಸ್ವರಗಳನ್ನು ಸ್ವಷ್ಟವಾಗಿಯೂ ನಿರ್ಧರಿತ ಅಳತೆಯಲ್ಲಿಯೇ ಉಚ್ಚರಿಸಬೇಕು.
ಭಾವಪೂರ್ಣತೆ/ ಭಾವಪೋಷಣೆ ನಾವು ನಿರ್ವಹಿಸುವ ಪಾತ್ರದ ಸ್ವಭಾವ, ಗುಣಗಳನ್ನು ಲಕ್ಷಿಸಿ, ಆ ಪಾತ್ರದ ಮೂಲ ಭಾವ ಹಾಗೂ ಸಂದರ್ಭಕ್ಕೆ ಸರಿಯಾಗಿ ಬದಲಾಗುವ ಭಾವವನ್ನು ಹಾಗೂ ಬದಲಾಗುವ ಭಾವವನ್ನು ಗುರುತಿಸಿಕೊಳ್ಳಬೇಕು. ಮೂಲ ಭಾವನೆಗಳ ಆಧಾರದಲ್ಲಿಯೇ ಬದಲಾಗುವ ಭಾವಗಳು ವರ್ತಿಸಬೇಕು. ಭಾವಪೂರ್ಣತೆ/ ಭಾವಪೋಷಣೆಯ ಮಾತು ಅತ್ಯಂತ ಹೃದ್ಯವಾಗುತ್ತದೆ.
ಅನುಕೂಲ ಸಾಹಿತ್ಯ ಮಾತು ಪರಿಣಾಮಕಾರಿಯಾಗಬೇಕಾದರೆ ನಾವು ಆಡುವ ಮಾತಿನ ಏರಿಳಿತ (ಸ್ಥಾಯಿ ಸ್ವರಗಳಲ್ಲಿ ) ಅನುಕೂಲವಾಗುವಂತ ಶಬ್ಧವನ್ನು ಬಳಸಬೇಕು. ಹಾಗೆ ಆಯ್ಕೆ ಮಾಡಿಕೊಳ್ಳದೇ ಮಾತನಾಡಿದಾಗ ಸ್ವರ ಕೆಡುವ ಸಂದರ್ಭವೂ ಇರುತ್ತದೆ.
ಪರಸ್ಪರ ಸಂಭಾಷಣೆ ಇಬ್ಬರು ಅಥವಾ ಹೆಚ್ಚು ಜನ ಒಂದೇ ಸಮಯದಲ್ಲಿ ಪಾತ್ರಗಳನ್ನು ನಿರ್ವಹಿಸುವಾಗ, ಪರಸ್ಪರ ಸಂಭಾಷಣೆಯಲ್ಲಿ, ಪರಸ್ಪರ ಮಾತನ್ನು ಕೇಳಬೇಕು. ಅದಕ್ಕೆ ಸರಿಯಾಗಿ, ಪೂರಕವಾದ ಉದ್ಗಾರಗಳನ್ನು ಹೇಳಬೇಕು. ತರ್ಕಕ್ಕಿಂತಲೂ, ಪರಸ್ಪರ ಪೂರಕವಾಗಿ ಪದ್ಯದ ಅರ್ಥವನ್ನು ಸಂಪನ್ನಗೊಳಿಸಬೇಕು, ಕಥಾ ನಿರ್ವಹಣೆ ಮಾಡಬೇಕು.
(ಮುಂದುವರಿಯುತ್ತದೆ)
留言