ತಾಳಮದ್ದಳೆಯ ಕ್ರಮಗಳು - 8 (ಆಖ್ಯಾನ: ಪುತ್ರಕಾಮೇಷ್ಠಿ)
- Ramanand Hegde Hellekoppa

- Oct 29
- 2 min read
ದಶರಥ-ಕೈಕೇಯಿ

ಕೈಕೇಯಿ: ಮಂಗಳಾಕ್ಷತೆಯೊಂದಿಗೇ ಹೋಗೋಣ. ಕಾಂತಾ ನಾನೂ ಬರ್ತೇನೆ.
ಶಂಕರಾಭರಣ - ಅಷ್ಟ ಕರೆದೊಯ್ಯಬೇಕು ಎನ್ನ | ನಿನ್ನೊಡನೀಗ||ಪರಮ ವೈಭವದಿಂದ ಪರಿಶೋಭಿಸುವ ಸ್ವರ್ಗ| ಪರಿಕಿಸಿ ನಲಿವೆನಾ| ಕರುಣಿಸೋ ಮೋಹನ್ನII
ಕೈಕೇಯಿ: ಕಾಂತಾ, ಇದೋ! ಇಂದೇ ಮಾಡಿದ ವಿಶೇಷ ಭಕ್ಷ್ಯ. ನೋಡಿ.. ರುಚಿ ನೋಡಿ.. ಚೆನ್ನಾಗಿದೆ ಅಲ್ವಾ..
ದಶರಥ: ಎಲಾ.. ಇದೇನೆ, ಇಷ್ಟು ದಿವಸ, ಎಷ್ಟು ದಿವಸ ಮೊದಲೇ ಮಾಡಿದ ಭಕ್ಷ್ಯ ಕೊಡ್ತಿದ್ದೆ..
ಕೈಕೇಯಿ: ಛೇ ಛೇ ಹಾಗಲ್ಲ. ಮತ್ತೆ ದೇವಲೋಕಕ್ಕೆ ಹೋಗ್ತೀರಿ ಅಂದ್ರಿ. ಹಾಗಾಗಿ ವಿಶೇಷ ಇರಲಿ ಎಂದೆ,
ದಶರಥ: ಓಹೋ, ನಿನ್ನ ಜೊತೆ ಮಾತನಾಡ್ತಾ ಇದ್ರೆ ಕಾರ್ಯಭಾರ ಮರತೇ ಹೋಗ್ತದೆ, ಸರಿ, ಈಗಲೇ ಹೊರಡ್ತೇನೆ.
ಕೈಕೇಯಿ: ನಾನೂ ಬರ್ತೇನೆ. ಕರೆದುಕೊಂಡು ಹೋಗಿ.
ದಶರಥ: ಆss.. ನೀನೂ ಬರ್ತೀಯಾ, ಅದೂss ಬಹುದೂರದ ಪ್ರಯಾಣ. ಅದೂss ನಾನೇನು ವಿಹಾರಕ್ಕಾಗಿ ಹೋಗುತ್ತಿಲ್ಲ. ಮತ್ತೆ.. ದೇವೇಂದ್ರ ಕರೆದದ್ದು ನನ್ನನ್ನು ಮಾತ್ರ.
ಕೈಕೇಯಿ: ಪತ್ನಿಗೆ ಪತಿಯೇ ಸರ್ವಸ್ವ ಎಂದ ಮೇಲೆ, ಪತಿ-ಪತ್ನಿಯರಲ್ಲಿ ಬೇಧವಿಲ್ಲ, ಎಂದ ಮೇಲೆ, ಪತಿಯ ಎಲ್ಲ ವಿಚಾರಗಳಲ್ಲೂ ಪತ್ನಿ ಸಮಾನ ಪಾಲುದಾರರು ಎಂದ ಮೇಲೆss, ಪತಿಯ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವವಳು ಎಂದಮೇಲೆsss -
ದಶರಥ: ಪತಿ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು.
ಕೈಕೇಯಿ: ಛೇ ಹಾಗೆಲ್ಲ ಹೇಳಬೇಡಿ, ನನ್ನ ಕೋರಿಕೆಯನ್ನು ಈಡೇರಿಸುವವರು ನೀವೇ ಅಲ್ಲವೆ!, ಇವತ್ತಿನವರೆಗೂ ನಾನು ಕೇಳಿದ್ದನ್ನು ಇಲ್ಲ ಎನ್ನದೆ ಅಸ್ತು ಎಂದವರು. ಈಗ ನಾನೂ ಬರ್ತೇನೆ.
ದಶರಥ: ಕೇಳಿದ್ದು ಕೊಡುವವರೆಗೂ, ಹಟ ಬಿಡುವವಳಲ್ಲ. ಆದರೆ, ಅದು ಸ್ವರ್ಗ ಲೋಕ. ಅಲ್ಲಿಯ ನಿಯಮ, ನಿಬಂಧನೆ ಹೇಗಿದೆಯೋ ಏನೋ..
ಕೈಕೇಯಿ: ನಿಯಮ-ನಿಬಂಧನೆ ನಿಮಗೇನೂ ಬಾಧಕವಿಲ್ಲ. ನಿಮ್ಮನ್ನು ಬಿಟ್ಟು ಎಷ್ಟು ದಿವಸವೂ ಇರಲಾರೆ. ಯುದ್ಧ ಎಷ್ಟು ದಿವಸವೊ ಏನೋ.. ಸ್ವರ್ಗ ಲೋಕ-ಅದು ಜೀವಂತ ಇರುವಾಗಲೇ ಕಾಣುವ ಭಾಗ್ಯ ಎಷ್ಟು ಜನರಿಗೆ ಲಭಿಸೀತು.. ಈ ಭೂಮಿಯ ಎಲ್ಲರ ಕನಸಿನ ತಾಣ ಅದು. ಅಲ್ಲಿಯ ವೈಭವದ ವ್ಯವಸ್ಥೆಗಳೆಲ್ಲ ಕೇವಲ ವರ್ಣನೆಯಿಂದ ಮಾತ್ರ ಕಂಡಿದ್ದು. ಈಗ ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿದೆ.ಇದು ಸುಸಮಯ.ಆದ್ದರಿಂದ ನನ್ನನ್ನು ಕರೆದುಕೊಂಡು ಹೋಗಿ. ಅಲ್ಲಿ ನಲಿದು, ಸಂತೋಷ ಹೊಂದುತ್ತೇನೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮಹಾ ಪತಿವ್ರತೆಯಾದ ಶಚಿದೇವಿಯನ್ನು ಸಂದರ್ಶಿಸಿ ಭಾಗ್ಯಸಂಪನ್ನಡಾಗುತ್ತೇನೆ. ನಾನು ಬರ್ತೇನೆ.. ದಯವಿಟ್ಟು ಕರೆದುಕೊಂಡು ಹೋಗಿ.
ದಶರಥ: ಪ್ರಿಯೇ....
ಶಂಕರಾಭರಣ - ಅಷ್ಟ ರಮಣಿ ನಿನ್ನೊಲವ ನಾನುIಮೆಚ್ಚಿದೆ ನೀಗIಸು ಮುದೆ ಬಾ ಜತೆಗೆ ನೀನು|| ಸಮರ ಸಂಘರ್ಷದ ಕ್ರಮಕೆ ಬೆಚ್ಚಲು ಬೇಡ|ಅಮರ ಲೋಕವ ನೋಡಿ ಅಮಿತ ಮೋದವ ತಾಳೆII
ದಶರಥ: ರಮಣೀ.. ನಿನ್ನಾಶಯವೇನೋ ಒಪ್ಪಬಹುದೆ. ಜೀವಮಾನ ಸಾಧನೆಯ ಫಲವಾಗಿ ಸ್ವರ್ಗವನ್ನು ಜೀವ ಇರುವಾಗಲೇ ನೋಡುವುದು ಒಂದು ಭಾಗ್ಯವೇ ಸರಿ. ಆಗಬಹುದು, ಬೇಗ ಸಿದ್ಧಳಾಗು,ನನ್ನ ಜೊತೆಗೆ ಬಾ.
ಕೈಕೇಯಿ: ಈಗಲೇ ಸಿದ್ದಳಾಗಿದ್ದೇನೆ. ಏಳಿ.
ದಶರಥ: ಎಲಾ..ಸ್ತ್ರೀಯರು ಇಷ್ಟು ಬೇಗ ಸಿದ್ದರಾಗ್ತಾರಾ!! ,ಅಬ್ಬ!!!, ಆದರೆ, ಮೊದಲು ನಾನು ಭೀಕರ ಯುದ್ಧವನ್ನೇ ಎದುರಿಸಬೇಕು. ಹಾಗಾಗಿ ಭಯ ಪಡಬೇಡ.
ಕೈಕೇಯಿ: ನಾನು ಕ್ಷತ್ರಿಯಳೇ. ಆ ಚಾತುರ್ಯ ತಿಳಿದೇ ನೀವು ನನ್ನನ್ನು ವಿವಾಹ ಮಾಡಿಕೊಂಡಿದ್ದೀರಿ. ನನಗೇಕೆ ಭಯ!? ಚತುರಂಗ ರಣ ವಿದ್ಯೆಯಲ್ಲಿ ಚತುರರು ನೀವು, ಜೊತೆಗಿದ್ದೀರಿ.
ದಶರಥ: ಪತಿಯ ಗೆಲುವಿಗೆ, ಸತಿಯ ಸಹಾಯ ಸಹಕಾರವೇ ಕಾರಣ ಆಗುತ್ತದೆ. ನೋಡೋಣ, ಈ ಮಾತಿನ ನಿಜದನುಭವ ಆದರೂ ಆಯ್ತು, ಬಲ್ಲವರ್ಯಾರು .ದುರುಳರ ಬಾದೆಯನ್ನು ನಿವಾರಿಸಿ, ಅಮರಲೋಕದ ಅಮಿತ ವೈಭವ ನೋಡಿ ಸಂತೋಷ ಹೊಂದಿ ಬರೋಣ. ಏಳು ಹೊರಡೋಣ.
ದೇವ ಸಾರಥಿ ಮಾತಲಿ, ನಾವು ಸಿದ್ಧ ಹೊರಡೋಣ.
ಮಾರವಿ - ಏಕ ಕೈಕೇಯ ಜೊತೆಗೊಂಡಾ ಮಾತಲಿ ಸಹI ಭೂಕಾಂತನು ಭರದಿ|ನಾಕವನೇರುತ ಕಂಡನುಧನುಜಾ|ನೀ ಕವ ಸತ್ವರದಿII







Comments