ಅಹಲ್ಯೆ (ಭಾಗ 4)
- Ramanand Hegde Hellekoppa

- Sep 6
- 3 min read
ಭಗವಂತನಿಗೂ ಧಾವಂತವೇ?, ಹೌದು-ಎಂದೆನಿಸುತ್ತದೆ. ದೇವರ ಲೀಲೆಯನ್ನು ಅವಲೋಕಿಸಿದಾಗ, ಶ್ರೀರಾಮ ಕಂಡ ಕೌತುಕ! - ಯಾರೋ ಅರೆ ಬರೆ ಕೆತ್ತಿಟ್ಟ ಶಿಲೆ ಅದೇನು! ಎಂಬ ಕುತೂಹಲ. ತಿಳಿದೋ, ತಿಳಿಯದೆಯೋ, ಏರುವುದಕ್ಕಾಗಿ ಪಾದವಿಟ್ಟ. ಆಶ್ಚರ್ಯ, ಶಿಲಾಮೂರ್ತಿ ಜೀವ ತಳೆಯಿತು. ಕಲ್ಲು ಕರಗಿ ಮೃದುವಾಯಿತು. ಮತ್ತೆ ಲಾವಣ್ಯವತಿಯಾದ ಸ್ತ್ರೀಯಾದಳು.

ಶ್ರೀರಾಮನೆಡೆಗೆ ಬಂದು, ಅವನ ಪಾದದ ಮೇಲೆ ಬಿದ್ದಳು, "ಪ್ರಭು!, ಇಂದಿಗೆ ಕರುಣೆಯಾಯಿತು. ಧನ್ಯೋಸ್ಮಿ. ಓ ನನ್ನ ಉದ್ಧಾರಕನೇ, ರಕ್ಷಿಸು ರಕ್ಷಿಸು" ಎಂದು ಉದ್ದಂಡ ನಮಸ್ಕಾರ ಮಾಡಿದಳು. ಶ್ರೀ ರಾಮನು ಆಶ್ಚರ್ಯದಿಂದ ಅವಳ ಮುಖವನ್ನೊಮ್ಮೆ, ಗುರು ವಿಶ್ವಾಮಿತ್ರರ ಮುಖವನ್ನೊಮ್ಮೆ ನೋಡಿ ಮೌನವಾಗಿಯೇ ಇದ್ದ. ಲಕ್ಷ್ಮಣನು ಚಕಿತನಾಗಿದ್ದ. ವಿಶ್ವಾಮಿತ್ರರು ಗಂಭೀರವಾಗಿ ಮುಗುಳುನಗುತ್ತ "ಶುಭವಾಗಲಿ! ಎಲೈ ಮಂಗಳಾಂಗಿ, ನೀನು ಪುನೀತಳಾದೆ. ನಿನ್ನ ವೃತ್ತಾಂತವನ್ನು, ನೀನೇ ಹೇಳು" ಎಂದು ಆಜ್ಞಾಪಿಸಿದರು. ಸಮುದ್ರವನ್ನು ಸೇರುವ ಆತುರದ ವೇಗದಲ್ಲಿರುವ ನದಿಯಂತೆ ಒಮ್ಮೆಗೆ ಹೇಳತೊಡಗಿದಳು, "ಪ್ರಭು! ನಾನು, ಮಹಾ ತಪಸ್ವಿಗಳಾದ ಗೌತಮರ ಭಾರ್ಯೆ ಅಹಲ್ಯೆ. ನನ್ನ ತಂದೆ ಬ್ರಹ್ಮದೇವ. ಯುಕ್ತ ವಯಸ್ಸಿನಲ್ಲಿ ವಿವಾಹ ಮಾಡಬೇಕಾದ ನಿಮಿತ್ತ, ನನ್ನ ಮದುವೆಗೊಂದು ಪಣವನಿಟ್ಟಿದ್ದ. ನನ್ನ ವಿವಾಹವಾಗುವುದಕ್ಕಾಗಿ ಬಂದ ವರಮಹಾಶಯರಲ್ಲಿ, ಯಾರು ಮೊದಲು ಭೂಪ್ರದಕ್ಷಿಣೆ ಮಾಡಿ ಬರುತ್ತಾರೋ ಅವರೇ ಅಹಲ್ಯೆಯನ್ನ ವಿವಾಹವಾಗುತ್ತಾರೆ. ಈ ಪಣವನ್ನು ಗೌತಮರು ತಮ್ಮ ಬುದ್ಧಿವಂತಿಕೆಯಿಂದ ಗೆದ್ದರು. ಅಂದು ಸತ್ಯಲೋಕದಲ್ಲಿರುವ ಕಾಮಧೇನುವನ್ನು ಪ್ರದಕ್ಷಿಣೆ ಮಾಡಿ, ನಾನು ಗೆದ್ದೆ ಎಂಬ ಉದ್ಘೋಷ ಮಾಡಿದರು. ಇದನ್ನು ಒಪ್ಪಿದ ಬ್ರಹ್ಮದೇವ. ಗೌತಮರಿಗೆ ನಾನು ಭಾರ್ಯಿಯಾದೆ. ಈ ವನಪ್ರದೇಶದಲ್ಲಿ ಅದೆಷ್ಟೋ ವರುಷ ಸುಖದಿಂದಲೇ ಇದ್ದವರು ನಾವು. ನಮಗೋರ್ವ ಮಗನು ಹುಟ್ಟಿದ. ಶತಾನಂದ ಎಂದು ಅವನ ಹೆಸರು. "ಇದು ಸುಖ ,ಇದು ಕಷ್ಟ" ಎಂಬುದನ್ನು ಕಾಲಯಾಪನೆ ಎಂದೇನು ತಿಳಿಯಲಾಗದು. ಯಾವುದೋ ವಿಶೇಷ ಶಕ್ತಿಯ ಪ್ರಾಪ್ತಿಗಾಗಿ ಗೌತಮರು ಅತಿದೀರ್ಘ ತಪಸ್ಸಿಗೆ ಉಪಕ್ರಮಿಸಿದರು. ಅಂತಹ ಸಮಯದಲ್ಲಿ ನಾನು ಹೇಗಿರಬೇಕೆಂಬ ಯಾವ ಶಿಕ್ಷಣವು ನನಗಿರಲಿಲ್ಲ. ಎಂದೊ ಒಂದು ದುರ್ದಿನ. ಗೌತಮರ ರೂಪ ಧರಿಸಿ ಇಂದ್ರ ನಾನಿದ್ದಲ್ಲಿಗೆ ಬಂದು ನನ್ನನ್ನು ಸ್ಪರ್ಶಿಸಿದ. ಅದೆಷ್ಟೋ ವರುಷ ದಾಂಪತ್ಯ ಸಂಗದಿಂದ ದೂರ ಉಳಿದ, ಜಿತೇಂದ್ರಿಯತೆಯ ಉದ್ದೇಶ, ಶಿಕ್ಷಣ ಎರಡು ಇಲ್ಲದ ನಾನು ಸಹಜವಾಗಿ ಯಾರದೋ ಒತ್ತಾಯವಿದೆಯೋ ಎಂಬಂತೆ, ಅವನು ಗೌತಮನಲ್ಲ ಎಂದು ಅಂತರಂಗಕ್ಕೆ ತಿಳಿದರೂ, ಇಂದ್ರೀಯ ಅಧಿಕಾರಿಯ ಪ್ರಭಾವಕ್ಕೆ ಅವನ ಮಿಥ್ಯಾ ವಾಚನ ಸಿದ್ದಾಂತಕ್ಕೂ ಮರುಳಾದೆ. ಅವನಿಗೆ ಸೋತೆ. ಅಧರ್ಮ ಕೃತ್ಯಕ್ಕೆ ವಶಳಾದೆ" ಹೀಗೆ ಹೇಳುತ್ತಾ ಹೇಳುತ್ತಾ ದುಃಖಿತಳಾದಳು. ಅವಳ ಕಣ್ಣೀರು ಶ್ರೀರಾಮನ ಪಾದಗಳನ್ನು ತೊಳೆಯಿತು.

ಯಾವುದೋ ಶುಭಸೂಚಕ ಎಂಬಂತೆ ಗಾಳಿ ತಂಪಾಗಿ ಬೀಸತೊಡಗಿತು. ಯಾರೋ ಕರೆದಂತೆ, ಆ ಮಂದಾನಿಲದಲ್ಲಿ ತೇಲಿ ಬಂದಂತೆ, ಶಾಂತತೆ ಹೊಂದಿದ ಮುಖವುಳ್ಳವನಾಗಿ ಗೌತಮ ಅಲ್ಲಿಗೆ ಬಂದು ಸೇರಿದ. ವಿಶ್ವಾಮಿತ್ರರಿಗೆ ವಂದಿಸಿದ. ವಿಶ್ವಾಮಿತ್ರರ ಸೂಚನೆಯಂತೆ ಮೌನವಾಗಿ ನಿಂತ. ಅಹಲ್ಯೆ ತನ್ನ ಮಾತನ್ನು ಮುಂದುವರಿಸಿದಳು. "ಪ್ರಭು! ಅಜ್ಞಾನದಿಂದ, ಮೋಹದಿಂದ ಇನ್ನೊಬ್ಬನ ಇಂದ್ರಜಾಲದ ಪ್ರಭಾವಕ್ಕೆ ಒಳಗಾಗಿ ನಾನು ಪತಿತಳಾದೆ. ಇದು ನನ್ನ ತಪ್ಪೇ? ಆ ಕಾಲಕ್ಕೆ, ಹೌದು ಎಂದು ನಿರ್ದೇಶಗೊಂಡಿದ್ದ ಗೌತಮರಿಂದ, ಇಂದ್ರನು-ನಾನು ಏಕಾಂತದಲ್ಲಿ ಇದ್ದದ್ದನ್ನು ಕಂಡು, ತಿಳಿದ ಗೌತಮರಿಂದ ಶಾಪ,"ಅಹಲ್ಯಾ ನೀನು ಕಲ್ಲಾಗು". ನನ್ನ ಪ್ರಾರ್ಥನೆಯಂತೆ ಶಾಪದ ಉಪಹತಿಯಂತೆ, ನಿನ್ನ ದಿವ್ಯತೆ, ಸ್ಪರ್ಷದಿಂದಲೇ ಮತ್ತೆ ಅಹಲ್ಯೆಯಾದೆ. ಪ್ರಭು ಅರಿವು ನೀವೇ. ಸಂದೇಹ ಪರಿಹರಿಸಿ ರಕ್ಷಿಸು ರಕ್ಷಿಸು." ಎಂದು ಪುನಃ ಪುನಃನಮಸ್ಕರಿಸಿದಳು. ವಿಶ್ವಾಮಿತ್ರರು ಗೌತಮರಿಗೆ ನೋಡಿ ಸನ್ನೆಯಿಂದ ಸೂಚಿಸಿದರು. ಅದರಂತೆ ಗೌತಮರು ಗದ್ಗದಸ್ವರದಿಂದ ಭಿನ್ನೈತೊಡಗಿದ. "ಪರಾಕ್ರಮವೇ ಪಣವಾದ ಸಂದರ್ಭದಲ್ಲಿ ಕೇವಲ ಬುದ್ದಿವಂತಿಕೆಯ ಪ್ರದರ್ಶನ ಒಪ್ಪಬಹುದಾದ ಮಾತಾದರೂ ಕ್ರಿಯಾಶೀಲತೆಯಲ್ಲಿ ಕರ್ಮ ರೂಪವಾದ ಪೌರುಷವೇ ಹೆಚ್ಚು ಮಾನ್ಯತೆಯನ್ನು ಪಡೆಯುತ್ತದೆ. ಅಂದಿನ ನನ್ನ ಬುದ್ದಿವಂತಿಕೆಯಿಂದ ಅಹಲ್ಯಾಳನ್ನು ವಿವಾಹವಾಗಿ ಬಂದೆ. ಆದರೆ ಋಷಿಜೀವನ ಶಿಕ್ಷಣವನ್ನು ಅಹಲ್ಯೆಗೆ ನೀಡಲೇ ಇಲ್ಲ. ಪತ್ನಿಯ ರಕ್ಷಣೆಯಲ್ಲಿ ಪತಿಯ ಕರ್ತವ್ಯವನ್ನು ಮರೆತಿದ್ದು ನನ್ನ ದೋಷ. ಗಂಡ-ಹೆಂಡತಿಯರಲ್ಲಿ ಪರಸ್ಪರ ರಹಸ್ಯವಿರಲೇಬಾರದು. ಆದರೆ ನನ್ನ ತಪಸ್ಸಿನ ಉದ್ದೇಶ ಮಾನವರಿಗೆ ಅವರವರ ಕರ್ಮಾನುಸಾರ ಪ್ರಾಪ್ತವಾಗುವ ಪರಗತಿಯ ನಿರ್ಣಯಾಧಿಕಾರವನ್ನು, ಅಂದರೆ ದೇವೇಂದ್ರನಲ್ಲಿರುವ ವಿದಾಯಕ ಶಕ್ತಿಯನ್ನು ಪಡೆಯುವ ಬಗ್ಗೆ ಅಹಲ್ಯೆಗೆ ಹೇಳಲೇ ಇಲ್ಲ. ಕಾರಣ ಭಯ. 'ಬೇರೆಯವರಿಗೆ ತಿಳಿದರೆ' ಎಂಬ ಆಲೋಚನೆ ಅಷ್ಟೇ. ಆದರೆ ಈ ಆಲೋಚನೆ ವೇದ ವಿರೋಧಿಯಾದದ್ದು. ವೇದ ಮಂತ್ರಗಳಾದರೂ ಬಹುಶೃತ ಆದವುಗಳು. ಹಾಗಾಗಿ ಇಂದ್ರ ಈ ಸಮಯ ಸಾಧಿಸಿ ನನ್ನ ತಪಸ್ಸನ್ನು ಕೆಡಿಸಿದ. ಅದಕ್ಕಾಗಿ ಅಹಲ್ಯೆಯನ್ನು ಬಳಸಿದ. ಅವನ ಕಾರ್ಯದಿಂದ ಕೋಪಗೊಂಡ ನಾನು ಅವನನ್ನು ಶಪಿಸಿದೆ. ನನ್ನ ತಪಸಂಗ್ರಹದ ಪುಣ್ಯ ಕಳೆದುಕೊಂಡೆ. ಪತ್ನಿಯನ್ನು ಶಪಿಸಿ ಧರ್ಮ ಕಳೆದುಕೊಂಡೆ. ಯಾವುದನ್ನು ಪಡೆಯುವುದಕ್ಕೆ ಅರ್ಹನಲ್ಲವೋ ಅದಕ್ಕಾಗಿ ಶಪಿಸಿ, ಕಾಲವನ್ನು, ಋಷಿತ್ವವನ್ನು, ಕಳೆದುಕೊಂಡೆ. ಎಲೈ ಮಹಿಮನೆ, ತಪ್ಪುಗಳೆಲ್ಲ ಭಿನ್ನವಿಸಿದ್ದೇನೆ. ಮುಂದೆ ಹೇಗೆ ಇದ್ದರೆ ಸರಿ ಎಂದು ತಿಳಿಸು" ಎಂದು ಗೌತಮರು ವಿನಂತಿ-ಪ್ರಾರ್ಥನೆ-ಕ್ಷಮಾಪಣೆಯ ಭಾವದಿಂದ ಕೇಳಿದರು.
ಶ್ರೀರಾಮನು-ವಿಶ್ವಾಮಿತ್ರರನ್ನು ನೋಡಿದೊಡನೆ "ನೀನೇ ನಿದರ್ಶಿಸು" ಎಂಬಂತೆ ಸೂಚಿಸಿದರು. ಶ್ರೀರಾಮ ಗಂಭೀರವಾಣಿಯಿಂದ ಹೇಳಿದ, "ಪೂಜ್ಯರಾದ ಗುರುಗಳ ಉಪದೇಶ ರೂಪವಾದ ಅನುಗ್ರಹದಿಂದ ನನ್ನ ವಿವೇಚನೆಯಂತೆ ತಿಳಿಸುತ್ತೇನೆ. ಇಲ್ಲಿ ಎಲ್ಲರೂ ತಿಳಿದು, ತಿಳಿಯದೆ, ತಪ್ಪು ಮಾಡಿದ್ದಾರೆ. ಧರ್ಮವು ನಾಶವಾಗುವುದಕ್ಕೆ ಅಥವಾ ಧರ್ಮವು ಸ್ಥಾಪನೆಯಾಗುವುದಕ್ಕೆ ಯಾರೋ ಒಬ್ಬರೇ ಕಾರಣವಾಗುವುದಿಲ್ಲ. ನಿಮಿತ್ತನಾಗುವುದಷ್ಟೇ. 'ಸತ್ಯವೇ ನೆಲೆಯಾಗಿ, ಧರ್ಮವೇ ಗತಿಯಾಗಿದ್ದಾಗ ಮಾನವತೆ ಸ್ಥಿರವಾಗಿರುತ್ತದೆ. ಭಾರ್ಯಾ ಸಂರಕ್ಷಣೆಯು ಪತಿಗೆ ವಿಹಿತವಾದ ಕರ್ತವ್ಯ. ಅದರಂತೆ ಪತಿ ಸಹಧರ್ಮಚರ್ಯೆಯಾದ ಪತ್ನಿಗೆ, ವಿಹಿತವಾದ ಧರ್ಮವಾಗಿರುತ್ತದೆ. ಅತಿಕ್ರಮದಿಂದ ಸಂಭವಿಸುವ ಅನರ್ಥಕ್ಕೆ ಪತಿ-ಪತ್ನಿಯರಿಬ್ಬರೂ ಹೊಣೆಗಾರರು. ಅಹಲ್ಯ-ಗೌತಮ ಇಬ್ಬರಿಂದಲೂ ಧರ್ಮ ಗ್ಲಾನಿಯಾಗಿದೆ. ಅದಕ್ಕೆ ತಕ್ಕುದಾದ ಶಿಕ್ಷೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕ ಪಶ್ಚಾತಾಪದಿಂದ ಪರಿಶುದ್ಧ ಹೃದಯದವರಾಗಿದ್ದಾರೆ. ಹಾಗಾಗಿ ಇನ್ನೂ ಶಿಕ್ಷೆ ನಿಮಗಿಲ್ಲ. ಮೊದಲಿನಂತೆ ಅನ್ಯೋನ್ಯ ದಾಂಪತ್ಯವನ್ನು ಆಚರಿಸಿಕೊಳ್ಳುವುದೇ ಸರಿಯಾದ ಧರ್ಮ. ಇನ್ನು ಇಲ್ಲಿ ಧರ್ಮ ಸ್ಥಾಪನೆಗಾಗಿ, ಧರ್ಮ ತಪ್ಪಿದ ದೇವೇಂದ್ರ...
ಅಷ್ಟರಲ್ಲಿ ವಿಶ್ವಾಮಿತ್ರರು "ಅವನಿಗೂ ಶಿಕ್ಷೆಯಾಗಿದೆ. ಗೌತಮರ ಶಾಪದಿಂದ ಬಂದ ಅರಿಂದ್ರಿಯತ್ವವನ್ನು ಪಿತೃದೇವತೆಗಳು ಪರಿಹರಿಸಿದ್ದಾರೆ" ಎಂದು ನುಡಿದರು.
ಶ್ರೀರಾಮ ಮುಂದುವರೆದು, "ತನಗೆ ಇದೇ ಬೇಕೆಂಬ ಕಾಮ, ಮತ್ತೊಂದು ಚೆನ್ನಾಗಿದೆ ಎಂಬ ಮೋಹ, ತನಗೆ ದಕ್ಕಲಿಲ್ಲ ಎಂಬ ಕ್ರೋಧ, ಅವನಿಗೆ ಸಿಕ್ಕಿದೆ ಎಂಬ ಮತ್ಸರ, ನಾಶಮಾಡುತ್ತೇನೆ ಎಂಬ ದ್ವೇಷ, ಇವೆಲ್ಲವೂ ಅರಿವನ್ನು, ಜ್ಞಾನವನ್ನು ನಾಶಗೊಳಿಸುವ ವಿಷಯಗಳು. ಇಂತಹ ದುರ್ಭವಕ್ಕೆ ಒಳಗಾಗಿ ಶಾಶ್ವತ ಧರ್ಮವನ್ನು ಕೆಡಿಸಿದವರೆಲ್ಲರೂ ಶಿಕ್ಷೆ ಅನುಭವಿಸಿ ಶುದ್ಧರಾಗಿದ್ದಾರೆ. ಇನ್ನು ಮುಂದೆಯೂ ಕೂಡ ಸದ್ಧರ್ಮ ಆಚರಣೆಯಲ್ಲಿ, ತಮ್ಮ ಮಿತಿಯಲ್ಲಿ ಸುಖೀ ಜೀವನ ಸಾಧಿಸಿದರೆ ಅದೇ ಲೋಕಕ್ಕೆ ಆದರ್ಶವಾಗುತ್ತದೆ" ಎಂದು ವಿಜ್ಞಾಪನೆಯ ಅಪ್ಪಣೆ ಮಾಡಿದ. ಅಹಲ್ಯೆ 'ತಾನು ಪಾವನಳು ಎಂಬುದು ನಿಜವಾದರೆ ತನ್ನನ್ನು ಪರಿಗ್ರಹಿಸಿ' ಎಂದು ಗೌತಮರಲ್ಲಿ ಪ್ರಾರ್ಥಿಸಿಕೊಂಡಳು. 'ನನ್ನ ಬಗ್ಗೆ ನಿನಗೆ ಜಿಗುಪ್ಸೆ ಇಲ್ಲದಿದ್ದರೆ ತನ್ನೊಡನೆ ಬಂದು ಸೇರಬಹುದು' ಎಂದು ಗೌತಮರು ನುಡಿದರು. ವಿಶ್ವಾಮಿತ್ರರು ನಗುತ್ತಾ "ಪರಿಶುದ್ಧ ಚಿತ್ತವೃತ್ತಿಯೇ ಜೀವನ ಧರ್ಮ" ಎಂದು ಹೇಳುತ್ತಾ, ಮಿಥಿಲೆಯೆಡೆಗೆ ಶ್ರೀರಾಮ-ಲಕ್ಷ್ಮಣರ ಜೊತೆಗೆ ಪ್ರಯಾಣ ಬೆಳೆಸಿದರು.





Comments