ಅದ್ಭುತ ವರ ಪಡೆದ ಹಿರಣ್ಯಕಶ್ಯಪು
- Asha Satish

- 5 hours ago
- 3 min read
ಕಾಮೋನ್ಮತ್ತಳಾದ ದಿತಿ ದೇವಿಯು ಸಂತಾನದ ಅಪೇಕ್ಷೆಯಿಂದ ಅಶುಭ ಘಳಿಗೆಯಲ್ಲಿ ಕಶ್ಯಪ ಬ್ರಹ್ಮರನ್ನು ಸೇರಿದ ಪರಿಣಾಮವಾಗಿ ದಿತಿ ದೇವಿಯ ಗರ್ಭದಿಂದ ಶಾಪಗ್ರಸ್ತರಾದಂತಹ ವೈಕುಂಠದ ದ್ವಾರಪಾಲಕರಾದ ಜಯ ವಿಜಯರು ರಾಕ್ಷಸ ಜನ್ಮವನ್ನು ಪಡೆದು ಹುಟ್ಟಿ ಬರುತ್ತಾರೆ. ಹುಟ್ಟಿನಿಂದಲೇ ದುರುಳ ಪ್ರವೃತ್ತಿಯವರಾಗಿದ್ದು, ಲೋಕ ಕಂಟಕರಾಗಿದ್ದ ಹಿರಾಣ್ಯಕ್ಷ ಮತ್ತು ಹಿರಣ್ಯಕಶಿಪು ಎಂಬ ಈ ರಾಕ್ಷಸ ಸಹೋದರರಲ್ಲಿ ಹಿರಾಣ್ಯಕ್ಷನನ್ನು ಶ್ರೀಹರಿಯು ವರಾಹಾವತಾರವನ್ನು ತಳೆದು ವಧಿಸುತ್ತಾನೆ.
ತನ್ನ ಸಹೋದರನ ಮರಣದಿಂದ ಸ್ವತಃ ಆಘಾತಗೊಂಡ ಹಿರಣ್ಯಕಶಿಪುವು ಶಕುನಿ, ಶಂಬರ, ದೃಷ್ಟ, ಭೂತ ಸಂತಾಪನ, ವೃಕ, ಕಾಲನಾಭ, ಹರಿಶ್ಮಶ್ರು ಮತ್ತು ಉತ್ಕಚ ಎಂಬ ಹಿರಾಣ್ಯಾಕ್ಷನ ಮಕ್ಕಳಿಗೆ ಸಾಂತ್ವನ ನೀಡಿ, ಹಿರಾಣ್ಯಾಕ್ಷನ ಪತ್ನಿ ಋಷಭಾನು ಹಾಗೂ ತಾಯಿಯಾದ ದಿತಿದೇವಿಯರನ್ನು ಕೂಡ ಸಮಾಧಾನಿಸುತ್ತಾನೆ, "ಹಿರಾಣ್ಯಾಕ್ಷ ಒಬ್ಬ ಅಪ್ರತಿಮ ವೀರ. ರಣರಂಗದಲ್ಲಿ ಶತ್ರುವಿನೊಡನೆ ಹೋರಾಡುತ್ತ ತನ್ನ ಪ್ರಣಾರ್ಪಣೆ ಮಾಡಿದ್ದಾನೆ. ಪ್ರತಿಯೊಬ್ಬ ವೀರ ಪುರುಷನೂ ಬಯಸುವ ಶ್ರೇಷ್ಠ ಮರಣ ಅದು. ಅದಕ್ಕಾಗಿ ದುಃಖಿಸಬೇಡಿ" ಎಂದು ಸಮಾಧಾನಿಸುತ್ತಾನೆ. ಜೊತೆಗೆ ಸಹೋದರನ ಸಾವಿಗೆ ಕಾರಣನಾದ ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ತೀರ್ಮಾನಿಸುತ್ತಾನೆ. ಆದ್ದರಿಂದ ದೇವತೆಗಳ ಶಕ್ತಿ ಕುಂದಬೇಕೆಂದಾದರೆ ದೇವತೆಗಳಿಗೆ ಸದಾ ಅಭಯವನ್ನು ನೀಡುವ ಶ್ರೀಹರಿಯನ್ನು ಬಲಹೀನ ನನ್ನಾಗಿಸಬೇಕು. ಭೂಲೋಕದಲ್ಲಿನ ಋಷಿ ಮುನಿಗಳು, ಬ್ರಾಹ್ಮಣರು, ಸಾಧು ಸಜ್ಜನರು ನಡೆಸುವ ಧರ್ಮ ಕಾರ್ಯಗಳೇ ಶ್ರೀಹರಿಗೆ ಶಕ್ತಿ. ಆದ್ದರಿಂದ ನೀವೆಲ್ಲ ಈಗಲೇ ತೆರಳಿ ಭೂಲೋಕದಲ್ಲಿ ಧರ್ಮಕಾರ್ಯಗಳಲ್ಲಿ ನಿರತರಾಗಿರುವವರ ಮೇಲೆ ಹಿಂಸೆಗೈದು ಅವರ ಕಾರ್ಯಕ್ಕೆ ವಿಘ್ನವೊಡ್ಡಬೇಕು, ಆ ಮೂಲಕವಾಗಿ ಶ್ರೀಹರಿಯ ಬಲವನ್ನು ಕುಂದಿಸಬೇಕು ಎಂದು ಅಜ್ಞಾಪಿಸಿ, ತನ್ನ ರಾಕ್ಷಸ ಪರಿವಾರವನ್ನು ಕಳುಹಿಸುತ್ತಾನೆ. ದೇವತೆಗಳ ಮೇಲೆ ಸೇಡು ತೀರಿಸಿಕೊಂಡು, ಸ್ವರ್ಗವನ್ನು ವಶಪಡಿಸಿಕೊಂಡು ಅಜೇಯನಾಗಿ ಸರ್ವ ಲೋಕಗಳನ್ನು ಆಳಬೇಕು ಎನ್ನುವ ದುರುದ್ದೇಶದಿಂದ ಹಿರಣ್ಯಕಷಿಪು ಮಂದರ ಪರ್ವತಕ್ಕೆ ತೆರಳಿ ಬ್ರಹ್ಮನನ್ನು ಕುರಿತು ಕೇವಲ ಕಾಲಿನ ಹೆಬ್ಬೆರಳುಗಳ ಮೇಲೆ ನಿಂತು ಎರಡು ತೋಳುಗಳನ್ನು ಮೇಲಕ್ಕೆ ಚಾಚಿ ಕಠಿಣವಾದ ತಪಸ್ಸನ್ನು ಆಚರಿಸಲು ತೊಡಗುತ್ತಾನೆ.
ಹೀಗೆ ಬಹಳ ಕಾಲದವರೆಗೆ ಹಿರಣ್ಯಕಶಿಪು ತಪಸ್ಸನ್ನು ಆಚರಿಸಿದ ಪರಿಣಾಮವಾಗಿ ಅವನ ತಲೆಯಿಂದ ಹೊಗೆಯನ್ನು ಕೂಡಿದ ಜ್ವಾಲೆಯು ಹೊರಹೊಮ್ಮಿ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸತೊಡಗುತ್ತದೆ. ಸಮಸ್ತ ಲೋಕಗಳನ್ನು ಸುಡುವುದಕ್ಕೆ ಆರಂಭಿಸುತ್ತದೆ. ಆ ಜ್ವಾಲೆಯಿಂದ ನದಿಗಳು ಸಮುದ್ರಗಳು ಕುದಿಯತೊಡಗುತ್ತವೆ. ಭೂಮಿಯು ನಡುಗತೊಡಗುತ್ತದೆ. ಗ್ರಹ ನಕ್ಷತ್ರಗಳು ಉರುಳಿ ಬೀಳುತ್ತವೆ. ದಶ ದಿಕ್ಕುಗಳು ಹಿರಣ್ಯಕಶಿಪುವಿನ ಆ ತಪೋಮಯ ಅಗ್ನಿ ಜ್ವಾಲೆಗಳಿಂದ ಉರಿಯಲು ಆರಂಭವಾಗುತ್ತದೆ. ಸ್ವರ್ಗದ ದೇವತೆಗಳು ಈ ತಾಪವನ್ನು ತಾಳಲಾರದೆ ಬ್ರಹ್ಮಲೋಕಕ್ಕೆ ತೆರಳಿ ಬ್ರಹ್ಮ ದೇವರನ್ನು ಪ್ರಾರ್ಥಿಸ ತೊಡಗುತ್ತಾರೆ. "ದೇವತೆಗಳಿಗೂ ಆರಾಧ್ಯನಾದ ಜಗತ್ಪಿತನಾದ ಬ್ರಹ್ಮದೇವರೇ! ಹಿರಣ್ಯಕಶಿಪುವಿನ ತಪೋಜ್ವಾಲೆಗಳಿಂದ ಸಮಸ್ತ ಲೋಕವು ಅಳಿದು ಹೋಗುತ್ತಿದೆ. ಆ ತಾಪವನ್ನು ನಾವು ತಡೆಯಲು ಸಾಧ್ಯವಿಲ್ಲ. ಆ ಜ್ವಾಲೆಯಿಂದ ಸಮಸ್ತ ಲೋಕವು ಸಂಪೂರ್ಣವಾಗಿ ನಾಶಹೊಂದುವ ಮೊದಲು ಆ ಜ್ವಾಲೆಯನ್ನು ಶಾಂತಗೊಳಿಸು ದೇವಾ. ಸಮಸ್ತ ಲೋಕಗಳ ಸಾರ್ವಭೌಮತ್ವವು ಹಿರಣ್ಯಕಷಿಪುವಿನಂತಹ ದುಷ್ಟನ ಕೈಗೆ ಸಿಕ್ಕಿದರೆ ಸಜ್ಜನರ ನಾಶವಾಗುವುದು. ಲೋಕ ವಿನಾಶ ಹೊಂದುವುದು. ಈ ಸಂಕಟದಿಂದ ನಮ್ಮನ್ನು ಹಾಗೂ ಜಗತ್ತನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾರೆ".

ದೇವತೆಗಳ ಅಳಲನ್ನು ಆಲಿಸಿದ ಬ್ರಹ್ಮದೇವರು ಪ್ರಜಾಪತಿಗಳೊಡನೆ ಹಿರಣ್ಯಕಶಿಪು ತಪಸ್ಸನ್ನು ಆಚರಿಸುತ್ತಿದ್ದ ಆಶ್ರಮಕ್ಕೆ ಹೋಗುತ್ತಾರೆ. ಅಲ್ಲಿ ಹೋದಾಗ ಹುತ್ತ, ಹುಲ್ಲು, ಬಿದಿರುಗಳಿಂದ ಹಿರಣ್ಯಕಶಿಪುವಿನ ದೇಹ ಮುಚ್ಚಿ ಹೋಗಿರುತ್ತದೆ. ತಪಸ್ಸಿಗೆ ಕುಳಿತ ಅವನ ಶರೀರದ ಮೇಧಸ್ಸು, ಚರ್ಮ, ಮಾಂಸ, ರಕ್ತ ಇವೆಲ್ಲವುಗಳನ್ನು ಇರುವೆಗಳು ತಿಂದು ನಾಶಗೊಳಿಸಿದ್ದವು. ಅಂತಹ ಸ್ಥಿತಿಯಲ್ಲೂ ತನ್ನ ತಪಸ್ಸಿನ ತೇಜದಿಂದ ಹಿರಣ್ಯಕಶಿಪುವು ತನ್ನ ತಪಃಶಕ್ತಿಯಿಂದ ಸಮಸ್ತ ಲೋಕವನ್ನು ಸುಡುತ್ತಿದ್ದನು. ಅದನ್ನು ನೋಡಿ ಬ್ರಹ್ಮದೇವರು ಕೂಡ ವಿಸ್ಮಿತರಾಗುತ್ತಾರೆ. ಹಿರಣ್ಯಕಶಿಪುವನ್ನು ಕುರಿತು, "ವತ್ಸ! ನಿನಗೆ ಮಂಗಳವಾಗಲಿ. ನಾನಿಂದು ನಿನ್ನ ಹೃದಯದ ಅದ್ಭುತವಾದ ಬಲವನ್ನು ನೋಡಿದೆ. ಇರುವೆ ಸೊಳ್ಳೆಗಳು ನಿನ್ನ ದೇಹವನ್ನು ತಿಂದು ನಾಶಗೊಳಿಸಿದ್ದರೂ ಕೂಡ ನಿನ್ನ ಪ್ರಾಣವು ಅಸ್ತಿಗತವಾಗಿ ಉಳಿದಿದೆ. ಇಂತಹ ಕಠಿಣವಾದ ತಪಸ್ಸನ್ನು ಹಿಂದೆ ಯಾವ ಋಷಿಯೂ ಕೂಡ ಮಾಡಿಲ್ಲ. ಮುಂದೆ ಮಾಡಲು ಸಾಧ್ಯವಿಲ್ಲ. ನಿನ್ನ ತಪಸ್ಸಿಗೆ ಮೆಚ್ಚಿ ವರವನ್ನು ಕೊಡಲು ಬಂದಿರುತ್ತೇನೆ. ನಿನಗಿಷ್ಟವಾದ ವರವನ್ನು ಬೇಡು" ಎಂದು ಹೇಳುತ್ತಾ ತಮ್ಮ ಕಮಂಡಲದಿಂದ ದಿವ್ಯವಾದ ಜಲವನ್ನು ಹಿರಣ್ಯಕಶ್ಯಪುವಿನ ಮೇಲೆ ಚಿಮುಕಿಸುತ್ತಾರೆ. ಹಾಗೆ ಜಲವನ್ನು ಪ್ರೋಕ್ಷಿಸಿದ ಕೂಡಲೇ ಪುನಃ ಬಲಿಷ್ಠವಾದ ದೇಹ ಮತ್ತು ಇಂದ್ರಿಯಗಳೊಂದಿಗೆ ಹಿರಣ್ಯಕಷಿಪು ಎದ್ದು ನಿಲ್ಲುತ್ತಾನೆ. ತನ್ನ ಮುಂದೆ ಅಂತರಿಕ್ಷದಲ್ಲಿ ಹಂಸವಾಹನರಾಗಿ ಬ್ರಹ್ಮದೇವರು ನಿಂತಿರುವುದನ್ನು ನೋಡಿ ಅವನಿಗೆ ಬಹಳ ಆನಂದವಾಗುತ್ತದೆ. ಶಿರ ಚಾಚಿ ಬ್ರಹ್ಮದೇವರಿಗೆ ನಮಸ್ಕಾರ ಮಾಡುತ್ತಾನೆ. ಗದ್ಗದ ಧ್ವನಿಯಿಂದ ಬ್ರಹ್ಮ ದೇವರನ್ನು ಕುರಿತು ಸ್ತುತಿಸುತ್ತಾ, "ಪ್ರಭು! ನೀನು ನನಗೆ ಅಭೀಷ್ಟವಾದ ವರವನ್ನು ಕೊಡುವುದಾದರೆ ಈ ಸೃಷ್ಟಿಯಲ್ಲಿ ನೀನು ಸೃಷ್ಟಿಸಿರುವ ಯಾವುದೇ ಪ್ರಾಣಿ, ಮನುಷ್ಯ, ದೇವತೆಗಳು ನಾಗಗಳು ಮುಂತಾದ ಯಾರಿಂದಲೂ ಕೂಡ ನನಗೆ ಮೃತ್ಯುಬಾರದಿರಲಿ. ಒಳಗೆ ಹೊರಗೆ, ಹಗಲು ರಾತ್ರಿ, ಅಸ್ತ್ರ ಶಸ್ತ್ರ, ಭೂಮಿ ಆಕಾಶ,ಇವು ಯಾವುವುಗಳಿಂದಲೂ ನನಗೆ ಮರಣ ಉಂಟಾಗದಿರಲಿ. ಈ ಲೋಕದಲ್ಲಿ ಯುದ್ಧದಲ್ಲಿ ನನಗೆ ಎದುರಾಳಿಗಳು ಯಾರು ಇಲ್ಲದಂತಾಗಲಿ. ಈ ಲೋಕದ ಎಲ್ಲ ಜೀವಿಗಳಿಗೂ ನಾನು ಏಕ ಛತ್ರಾಧಿಪತಿಯಾಗುವಂತೆ ವರವನ್ನು ಕರುಣಿಸು. ಇಂದ್ರಾದಿ ಸಮಸ್ತ ಲೋಕ ಪಾಲಕರಿಗೆ ಇರುವಂತಹ ಮಹಿಮೆಯು ನನಗೂ ಇರುವಂತಾಗಲಿ. ತಪಸ್ವಿಗಳಲ್ಲಿ ಯೋಗಿಗಳಲ್ಲಿ ಇರುವಂತಹ ಶಕ್ತಿಯನ್ನು ನನಗೂ ಅನುಗ್ರಹಿಸು" ಎಂದು ಬೇಡುತ್ತಾನೆ. ಹಿರಣ್ಯಕಶಿಪುವಿನ ಇಚ್ಛೆಯಂತೆ ಬ್ರಹ್ಮದೇವರು ಅವನಿಗೆ ವರವನ್ನು ಅನುಗ್ರಹಿಸುತ್ತಾರೆ.
ಅದ್ಭುತವಾದ ವರವನ್ನು ಪಡೆದ ಹಿರಣ್ಯಕಶಿಪು ಇನ್ನಷ್ಟು ಮದಮತ್ತನಾಗಿ ಮೂರು ಲೋಕಗಳನ್ನು, ದೇವತೆಗಳನ್ನು, ರಾಜರನ್ನು, ಯಕ್ಷ ಕಿನ್ನರಾದಿ ಗಂಧರ್ವರನ್ನು, ಋಷಿಮುನಿಗಳನ್ನೂ ಎಲ್ಲರನ್ನು ಹಿಂಸಿಸಿ, ಸೋಲಿಸಿ ವಿಶ್ವವಿಜಯಿಯಾಗಿ ಮೆರೆಯಲು ತೊಡಗುತ್ತಾನೆ. ಸ್ವರ್ಗವನ್ನು ವಶಪಡಿಸಿಕೊಂಡು, ಅಲ್ಲಿನ ಸುಖೋಪಭೋಗಗಳನ್ನು ಅನುಭವಿಸುತ್ತಾ ಅಲ್ಲೇ ವಾಸ ಮಾಡುತ್ತಿದ್ದನು. ಸದಾ ಮದ್ಯವನ್ನು ಕುಡಿದು ಉನ್ಮತ್ತನಾಗಿರುತ್ತಿದ್ದನು. ದೇವ ದಾನವರೆಲ್ಲರೂ ಭಯಭೀತರಾಗಿ ಅವನ ಅಡಿಗಳಿಗೆ ವಂದಿಸುತ್ತಿದ್ದರು. ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಬಿಟ್ಟು ಉಳಿದೆಲ್ಲಾ ದೇವತೆಗಳು ದೈತ್ಯನಿಗೆ ಕಪ್ಪ ಕಾಣಿಕೆಯನ್ನು ಕೊಟ್ಟು ಅವನನ್ನು ಸೇವೆಗೈಯಬೇಕಾಗಿತ್ತು. ಧರ್ಮ ಕರ್ಮಗಳನ್ನು ಪಾಲಿಸುತ್ತಿದ್ದ ಪುಣ್ಯಾತ್ಮರು ಮಾಡುತ್ತಿದ್ದ ದೊಡ್ಡ ದೊಡ್ಡ ಯಜ್ಞ ಯಾಗಗಳ ಆಹುತಿಗಳನ್ನು ತನ್ನ ತೇಜಸ್ಸಿನಿಂದ ಕಸಿದುಕೊಂಡು ಬಿಡುತ್ತಿದ್ದನು. ಪೃಥ್ವಿಯು ಉಳುಮೆ ಇಲ್ಲದೆಯೇ ಆಹಾರ ಬೆಳೆಗಳನ್ನು ನೀಡಬೇಕಾಗಿತ್ತು. ಅವನು ಬಯಸಿದ್ದೆಲ್ಲವೂ ಅಂತರಿಕ್ಷದಿಂದ ಅವನಿಗೆ ಸಿಗಬೇಕಿತ್ತು. ಆಕಾಶವು ಬಗೆ ಬಗೆಯ ಆಶ್ಚರ್ಯಕರ ವಸ್ತುಗಳನ್ನು ತೋರಿಸಿ ಮನರಂಜನೆಯನ್ನು ನೀಡಬೇಕಿತ್ತು. ಸಮುದ್ರಗಳು ತಮ್ಮ ಪತ್ನಿಯರಾದ ನದಿಗಳೊಂದಿಗೆ ಅಲೆಗಳ ಮೂಲಕ ರತ್ನ ರಾಶಿಗಳನ್ನು ಅರ್ಪಿಸಬೇಕಾಗಿತ್ತು. ಪರ್ವತಗಳು ತಮ್ಮ ತಪ್ಪಲುಗಳಲ್ಲಿ ಅವನಿಗಾಗಿ ವಿಹಾರೋದ್ಯನವನಗಳನ್ನು ಒದಗಿಸಬೇಕಿತ್ತು. ವೃಕ್ಷಗಳು ಎಲ್ಲ ಋತುಗಳಲ್ಲಿಯೂ ಹೂವು ಹಣ್ಣುಗಳನ್ನು ನೀಡಿ ಸಮೃದ್ಧವಾಗಿ ಇರಬೇಕಿತ್ತು. ಅವನೊಬ್ಬನೇ ಎಲ್ಲಾ ಲೋಕಪಾಲಕರ ಬೇರೆ ಬೇರೆ ಗುಣ ಮಹಿಮೆಗಳನ್ನು ಧರಿಸಿದ್ದನು. ಹೀಗೆ ದಿಗ್ವಿಜಯಿಯಾದ ಅವನು ಸಾರ್ವಭೌಮನಂತೆ ತನಗೆ ಪ್ರಿಯವಾದ ವಿಷಯಗಳನ್ನು ಸ್ವಚ್ಛಂದವಾಗಿ ಅನುಭವಿಸುತ್ತಾ, ಇತರ ಜೀವಿಗಳನ್ನು ಹಿಂಸಿಸಿ, ಅತ್ಯಂತ ಕ್ರೂರಿಯಾಗಿ ಬದುಕುತ್ತಾ ಇದ್ದನು.
ಹಿರಣ್ಯಕಶಿಪು ಎಂಬ ಈ ಕ್ರೂರಿ ದೈತ್ಯನ ನಿರ್ನಾಮ ಕಾರ್ಯ ಹೇಗೆ ನಡೆಯುತ್ತದೆ, ಅದಕ್ಕಾಗಿ ಭಗವಂತನ ಯೋಜನೆ ಏನು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.




Comments