ಜಟಾಯು
- Ravishankara Hegde Dodnalli

- Aug 2
- 1 min read
ರಾಮಾಯಣದಲ್ಲಿ ಅನೇಕ ಪ್ರಾಣಿ ಪಕ್ಷಿಗಳ ಪಾತ್ರಗಳು ಬರುತ್ತವೆ. ಅವುಗಳಲ್ಲಿ ಅತ್ಯಂತ ಪ್ರಧಾನವಾದ ಪಾತ್ರ ಜಟಾಯು. ಸೀತಾ ಅಪಹರಣದ ಕಾಲದಲ್ಲಿ ರಾವಣನನ್ನು ಎದುರಿಸಿದ ಪರಾಕ್ರಮಿಯಾದ ಪಕ್ಷಿ ಈ ಜಟಾಯು. ಈ ಜಟಾಯುವಿನ ಮೂಲ ಯಾವುದು? ಇವನ ತಂದೆ-ತಾಯಿ ಯಾರು? ರಾಮ ಹಾಗೂ ಸೀತೆಯರ ಪರಿಚಯ ಮೊದಲೇ ಇವನಿಗಿತ್ತೆ? ಎಂಬ ಪ್ರಶ್ನೆಗಳಿಗೆ ರಾಮಾಯಣದಲ್ಲಿಯೇ ಉತ್ತರ ಸಿಗುತ್ತದೆ.

ಅಗಸ್ತ್ಯರ ಆಶೀರ್ವಾದವನ್ನು, ಅವರಿಂದ ವಿಷ್ಣು ಧನಸ್ಸನ್ನು, ಅಕ್ಷಯ ಬತ್ತಳಿಕೆಯನ್ನು ಪಡೆದ ರಾಮನು ಸೀತಾ-ಲಕ್ಷ್ಮಣ ಸಮೇತನಾಗಿ ಪಂಚವಟೀ ಪ್ರದೇಶದ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ಅವರು ಪಂಚವಟೀ ಮಾರ್ಗದಲ್ಲಿ ಮರದಮೇಲೆ ಬೃಹದಾಕಾರವಾದ ಗೃಧ್ರವೊಂದು ಕುಳಿತಿರುವುದನ್ನು ನೋಡುತ್ತಾರೆ. ಆಗ ಪಕ್ಷಿಯ ರೂಪದಲ್ಲಿರುವ ರಾಕ್ಷಸನೆಂದು ಭಾವಿಸಿ ರಾಮನು "ಎಲೈ ಪಕ್ಷಿಯೇ ಯಾರು ನೀನು"? ಎಂದು ಕೇಳುತ್ತಾನೆ. ಆಗ ಆ ಪಕ್ಷಿಯು "ವತ್ಸ ನಾನು ನಿನ್ನ ತಂದೆಯ ಸ್ನೇಹಿನಾಗಿದ್ದೇನೆ. " ಎಂದು ಹೇಳುತ್ತದೆ. ಆಗ ರಾಮನು "ಹೇ ಗೃಧ್ರ ರಾಜನೇ! ನಿನ್ನ ಕುಲ ಯಾವುದು?" ಎಂದು ಕೇಳುತ್ತಾನೆ. ಆಗ ಆ ಗೃಧ್ರವು ಸೃಷ್ಟಿಯ ಮೂಲವನ್ನೇ ವಿವರಿಸುತ್ತದೆ. ಹಿಂದೆ ಕರ್ದಮ, ವಿಕ್ರೀತ, ಶೇಷ, ಸಂಶ್ರಯ, ಬಹುಪುತ್ರ, ಸ್ಥಾಣು, ಮರೀಚಿ, ಅತ್ರಿ, ಕ್ರತು, ಪುಲಸ್ತ್ಯ, ಅಂಗಿರಸ, ಪ್ರಚೇತಸ, ಪುಲಹ, ದಕ್ಷ, ವಿವಸ್ವಾನ್, ಅರಿಷ್ಟನೇಮಿ, ಮತ್ತು ಕಷ್ಯಪರೆಂಬ ಹದಿನಾರು ಪ್ರಜಾಪತಿಗಳಲ್ಲಿ ದಕ್ಷಪ್ರಜಾಪತಿಯ ಅರವತ್ತು ಮಂದಿ ಹೆಣ್ಣುಮಕ್ಕಳಲ್ಲಿ, ಅದಿತಿ, ದಿತಿ, ದನು, ಕಾಲಿಕಾ, ತಾಮ್ರಾ, ಕ್ರೋಧವಶಾ, ಮನು ಹಾಗೂ ಅನಲಾ ಎಂಬ ಎಂಟು ಮಕ್ಕಳನ್ನು ಕಶ್ಯಪನು ಮದುವೆಯಾದನು. ಅವರಲ್ಲಿ ತಾಮ್ರಾ ಎಂಬ ಪತ್ನಿಯಲ್ಲಿ ಶುಕಿ ಎಂಬ ಮಗಳು ಜನಿಸಿದಳು. ಆ ಶುಕಿಯ ಮಗಳು ನತೆ. ಆ ನತೆಯ ಮಗಳು ವಿನತೆ. ಆ ವಿನತೆಯು ಗರುಡ ಹಾಗೂ ಅರುಣ ಎಂಬ ಎರಡು ಮಕ್ಕಳಿಗೆ ಜನ್ಮವಿತ್ತಳು. ಅವರಲ್ಲಿ ಸೂರ್ಯನ ಸಾರಥಿಯಾದ ಅರುಣನ ಮಗ ಜಟಾಯು. ಇವನ ತಾಯಿ ಶ್ಯೇನಿ. ಆ ಜಟಾಯುವೇ ಮರದ ಮೇಲೆ ಕುಳಿತಿರುವ ಬೃಹದಾಕಾರವಾದ ಪಕ್ಷಿ ಎಂಬ ಕಥೆಯನ್ನು ಸ್ವತಃ ಆ ಪಕ್ಷಿಯೇ ಹೇಳಿತು.
ಹೀಗೆ ಜಟಾಯುವಿನ ಕುಲ ವೃತ್ತಾಂತವನ್ನು ರಾಮನು ತಿಳಿದು ಅವನಿಗೆ ನಮಸ್ಕರಿಸಿ ಆಶೀರ್ವಾದ ಪಡೆದನು. ಈತನು ತನ್ನ ತಂದೆಯ ಮಿತ್ರನೆಂದು ತಿಳಿದು ಜಟಾಯುವನ್ನು ಆಲಂಗಿಸಿ ಆನಂದಿಸಿದನು.
ರಾಮಾಯಣದಲ್ಲಿ ಬರುವ ಜಟಾಯುವಿನ ಗುಣ ಲೋಕದಲ್ಲಿರುವ ಎಲ್ಲರಿಗೂ ಮಾದರಿಯಾಗುವಂತೆ ಇದೆ. ಪಕ್ಷಿಯೂ ಪರೋಪಕಾರವನ್ನು ಮಾಡುವ ಗುಣವನ್ನು ಹೊಂದಿದೆ ಎಂದರೆ ಮನುಷ್ಯ ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕು ಎಂಬುದು ಅದರ ತಾತ್ಪರ್ಯ.
ಇದು ಜಟಾಯುವಿನ ಕಥೆ.








Comments